ಪ್ರಜಾ ನಾಯಕ ಸುದ್ದಿ ದಾವಣಗೆರೆ :-ಬಿಡಿಭಾಗ ಮತ್ತು ಲಾರಿ ಗಳನ್ನು ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಖತರ್ನಾಕ್ ಗ್ಯಾಂಗ್ ಪತ್ತೆ ಮಾಡಿರುವ ದಾವಣಗೆರೆ ಗ್ರಾಮಾಂತರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಓಸ್ಮಾನಬಾದ್ ಜಿಲ್ಲೆಯ ವಾಶಿ ತಾಲೂಕಿನ ಪ್ರಕಾಶ್ ನಾನಾ ಶಿಂಧೆ, ಅನಿಲ್ ಬಬನ್ ಶಿಂಧೆ, ದತ್ತಾ ಗೋವರ್ಧನ್ ಶಿಂಧೆ, ಸಂತೋಷ್ ಹಿಮ್ಮತ್ ಕಾಳೆ, ಉಮೇಶ್ ದಿಗಂಬರ್ ಲಾಖೆ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 30.20 ಲಕ್ಷ ರೂಪಾಯಿ ಮೌಲ್ಯದ ಗಾಲಿ ಹಾಗೂ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಎ.ಎಂ.ಎಲ್ , ಮೋಟಾರ್ ಪೈ ಲಿಮಿಟೆಡ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶಂಕರಪ್ಪ ಎನ್ನುವವರು ಕಂಪನಿಯ ವರ್ಕ್ ಶಾಪ್ ನಲ್ಲಿ 12 ಲಾರಿಯ ಟೈರ್ಗಳು, ಎರಡು ಲಾರಿಯ ಬ್ಯಾಟರಿಗಳು ಸೇರಿದಂತೆ 3,85,000 ರೂ.ಮೌಲ್ಯದ ವಸ್ತುಗಳು ಕಳುವಾಗಿದ್ದ ಹಿನ್ನೆಲೆಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿಗಳ ಪತ್ತೆಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸವಾಲ್, ಪೊಲೀಸ್ ಇನ್ಸ್ಪೆಕ್ಟರ್ ಲಿಂಗನಗೌಡ ನೇಗಳೂರು ಮಾರ್ಗದರ್ಶನ ದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹಾರೂನ್ ಅಖ್ತರ್ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವು ಮಹಾರಾಷ್ಟ್ರ ರಾಜ್ಯದ ಓಸ್ಮಾನಾಬಾದ್ ಜಿಲ್ಲೆಯ ವಾಶಿ ತಾಲೂಕಿನ ಪ್ರಕಾಶ್ ನಾನಾ ಶಿಂಧೆ, ಅನಿಲ್ ಬಬನ್ ಶಿಂಧೆ, ದತ್ತಾ ಗೋವರ್ಧನ್ ಶಿಂಧೆ, ಸಂತೋಷ್ ಹಿಮ್ಮತ್ ಕಾಳೆ, ಉಮೇಶ್ ದಿಗಂಬರ್ ಎನ್ನುವ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.
ಆರೋಪಿತರಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 13 ಪ್ರಕರಣಗಳು, ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣ ಗಳಲ್ಲಿ ಕಳ್ಳತನವಾದ 22 ಟೈರುಗಳ ಅಂದಾಜು ಮೌಲ್ಯ ಬೆಲೆ 8.20 ಲಕ್ಷ ರೂ. ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಸುಮಾರು 22 ಲಕ್ಷ ರೂ . ಬೆಲೆ ಬಾಳುವ ಎರಡು ಲಾರಿಗಳನ್ನು ವಶಪಡಿಸಿ ಕೊಂಡಿದ್ದಾರೆ. ಸದ್ಯ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
ಆರೋಪಿತರನ್ನು ಪತ್ತೆ ಹಚ್ಚಿ ಕಳ್ಳತನವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹಾರೂನ್ ಅಖ್ತರ್,ಎ.ಆರ್. ಮುಂದಿನ ಮನಿ, ಯಾಸೀನ್ ಉಲ್ಲಾ ಗುರುಶಾಂತಯ್ಯ, ದೇವೇಂದ್ರ ನಾಯ್ಕ, ಹನುಮಂತ ಕವಾಡಿ, ಸೈಯ್ಯದ್ ಗಫಾರ್, ಮಹ್ಮದ್ ಯೂಸೂಫ್ ಅತ್ತಾರ್, ಅಣ್ಣಯ್ಯ, ನಾಗರಾಜಯ್ಯ, ಮಾರುತಿ, ಮಂಜುನಾಥ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ ಶಾಂತ ಕುಮಾರ್ ಅವರನ್ನು ಎಸ್ಪಿ ಸಿ. ಬಿ. ರಿಷ್ಯಂತ್, ಎಎಸ್ಪಿ ಆರ್. ಬಿ. ಬಸರಗಿ ಅಭಿನಂದಿಸಿದ್ದಾರೆ.