ವಿಶೇಷ ವರದಿ ಪ್ರಜಾ ನಾಯಕ ಸುದ್ದಿ -: ಅಂಬೇಡ್ಕರ್ ನಮ್ಮ ಘನ ಸಂವಿಧಾನದ ಪ್ರಮುಖ ನಿರ್ಮಾಪಕ. ಭಾರತೀಯ ರಾಜಕೀಯ ರಂಗದ ಹಲವು ವಿಷಯಗಳ ನಿರ್ದೇಶಕ ಅಮೆರಿಕಾಗೆ ಹೋಗಿ ಬಂದವರಿಗೆ ಏನು ಗೌರವ! ಬ್ರಿಟನ್ಗೆ ಹೋಗಿ ಓದಿ ಬಂದರಂತೂ ಅದೆಷ್ಟು ಮರ್ಯಾದೆ.
ಆದರೆ ಈ ಮನುಷ್ಯನಿಗೆ ಅದೊಂದು ಸಿಗಲಿಲ್ಲ. ನೆಹರು ಕ್ಯಾಬಿನೆಟ್ನಲ್ಲಿ ಕೇಂದ್ರ ಕಾನೂನು ಸಚಿವರಾಗಿದ್ದವರು. ಹಿಂದೂ ಕೋಡ್ ಬಿಲ್ ಪಾಸಾಗುವುದಿಲ್ಲ ಎಂದು ನೊಂದು ಕ್ಯಾಬಿನೆಟ್ನಲ್ಲಿನ ಸಚಿವಸ್ಥಾನಕ್ಕೆ ರಾಜೀನಾಮೆ ಬಿಸಾಡಿ ಹೊರನಡೆದರು.
ಅವರು ನಮ್ಮ ಈ ನಿರ್ಣಯ ಸಮರ್ಥಿಸಿಕೊಂಡು ಮಾತನಾಡಿ ನಿರ್ಗಮಿಸಲು ಆಗಿನ ಸ್ಪೀಕರ್ ಅನಂತಶಯನo ಅಯ್ಯಂಗಾರ್ ಅವಕಾಶ ಕೊಡಲಿಲ್ಲ.ಹೌದು ದೇಶದ ಮೊದಲ ಕಾನೂನು ಸಚಿವರಾಗಿದ್ದ ಅವರೇ ಬಾಬಾಸಾಹೇಬ್ ಅಂಬೇಡ್ಕರ್ ಯಾರ ಮುಂದೆಯೂ ಪದವಿ, ಪ್ರತಿಷ್ಠೆ ಹೀಗೆ ಕೈಚಾಚಿ ಏನೂ ಕೇಳದ ಪರಮ ಸ್ವಾಭಿಮಾನಿ ಅವರು. 1956ರ ಡಿಸೆಂಬರ್ 6 ರಂದು ಮರಣ ಹೊಂದಿದವರು ಎಂದು ಇತಿಹಾಸ ಹೇಳುತ್ತದೆ. ಅಭಿಮಾನ ಪೂರ್ವಕವಾಗಿ ನಾವೆಲ್ಲ ಪರಿನಿರ್ವಾಣ ದಿನವೆಂದು ಕರೆಯುತ್ತೇವೆ. ಏನೇ ಇರಲಿ ಈಗ ಮತ್ತೆ ಎದ್ದಿರುವ ಪ್ರಶ್ನೆ ಬಾಬಾಸಾಹೇಬರ ಮರಣ ಸಹಜವೇ ಅಥವಾ ಅದೊಂದು ಹತ್ಯೆಯೇ?
ಅಂಬೇಡ್ಕರ್ ರಮಾಬಾಯಿಯೊಡನೆ ದೀರ್ಘ ದಾಂಪತ್ಯ ನಡೆಸಿದರು. ಆಕೆ 1935ರಲ್ಲಿ ಅಸು ನೀಗಿದರು. ಆಪ್ತರು ಮರುಮದುವೆಗೆ ಬಲವಂತ ಮಾಡಿದರೂ ಶೀಲ, ಚಾರಿತ್ರಕ್ಕೆ ಬಹಳ ಬೆಲೆ ಕೊಡುವ, ಸದಾ ಅಧ್ಯಯನ ಶೀಲರಾದ ಅವರು ಮರುವಿವಾಹ ಬೇಡ ಎಂದು ಸುಮ್ಮನಿದ್ದರು. ಕೊನೆಗೆ ಆಪ್ತರ ಸಲಹೆಯಂತೆ ಶಾರದಾ ಕಬೀರ್ರನ್ನು ಅಂಬೇಡ್ಕರ್ 1948ರಲ್ಲಿ ಮದುವೆಯಾದರು. (ಹದಿಮೂರು ವರುಷದ ತರುವಾಯ) ಇಲ್ಲಿಂದ ಹೇಳುವ ಹಕೀಕತ್ ಆರಂಭವಾಗುತ್ತದೆ.
ಅಂಬೇಡ್ಕರ್ ಅವರಿಗೆ ಸೋಹನ್ಲಾಲ್ ಶಾಸ್ತ್ರಿ ಶಂಕರಾನಂದ ಶಾಸ್ತ್ರಿ ಮುಂತಾದ ಆಪ್ತರಿದ್ದರು. ನಾನಕ್ ಚಂದ್ ರತ್ತೂ ಮನೆಮಗನಂತೆ ಹಗಲೂ-ಇರುಳೂ ಅಂಬೇಡ್ಕರ್ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. ಕ್ರಮೇಣ ಎಲ್ಲರನ್ನು ಅಂಬೇಡ್ಕರ್ ಅವರಿಂದ ದೂರ ಮಾಡುವ ಪ್ರಯತ್ನ ನಡೆಸಲಾಯಿತು. ಈಗ ಇರುವ ಪ್ರಶ್ನೆ ಅಂಬೇಡ್ಕರ್ ಅವರು ಅಸುನೀಗಿದ ಬಳಿಕ ಅವರ ಶವಪರೀಕ್ಷೆಗೆ ಹತ್ತಿರದವರು ಆಗ್ರಹಿಸಿದರೂ ಯಾಕೆ ಯಾರೂ ಅವಕಾಶ ಮಾಡಿಕೊಡಲಿಲ್ಲ?
ಅಷ್ಟುದೊಡ್ಡ ನಾಯಕನ ಮರಣ ಅಸಹಜ ಅಂತ ಹತ್ತಿರದವರಿಗೆ ಯಾಕೆ ಅನಿಸಿತ್ತು? ಇದಕ್ಕೆ ಕಾರಣಗಳಿವೆ. ಅಂಬೇಡ್ಕರ್ ಬೆಂಕಿಯಂತಹ ಮನುಷ್ಯ, ಅಪ್ಪಟ ಹೋರಾಟಗಾರ ಜೊತೆಗೆ ಅಪಾರ ಅಧ್ಯಯನಶೀಲ. ಅವರು ಮರಾಠಿಯಲ್ಲಿ, ಇಂಗ್ಲೀಷ್ನಲ್ಲಿ ಮಾಡುತ್ತಿದ್ದ ಭಾಷಣ ಮತ್ತು ಬರೆಯುತ್ತಿದ್ದ ಲೇಖನಗಳು ಮೂಲಭೂತವಾದಿಗಳ ನಿದ್ದೆ ಕೆಡಿಸಿತ್ತು. ಅನೇಕ ಸಲ ಅವರ ಮೇಲೆ ಈ ಕಾರಣಕ್ಕೆ ಕೊಲೆಯ ಪ್ರಯತ್ನಗಳೂ ನಡೆದಿದ್ದವು.
ಗಾಂಧೀಜಿ – ಬೋಸ್ – ಮುಖರ್ಜಿ – ಅಂಬೇಡ್ಕರ್ – ದೀನದ ಯಾಳ್ – ಲಾಲ್ ಬಹದ್ದೂರ್ ಶಾಸ್ತ್ರಿ ಈ ಆರು ಹಿರಿಯ ನಾಯಕರು ಹೇಗೆ ಅಸುನೀಗಿದರು ಎಂಬುದು ಪಕ್ಕಕ್ಕೆ ತಳ್ಳುವ ಸಾಮಾನ್ಯ ವಿಷಯವಲ್ಲ. ಈಗ ದೇಶದ ಜನರ ಮುಂದೆ ಇಂಥ ಅನೇಕ ಪ್ರಶ್ನೆಗಳಿವೆ. ಅಂಬೇಡ್ಕರ್ ಅವರ ಸಾವಿನ ಸೂಕ್ತ ತನಿಖೆ ಮಾಡಿಸಲು ಸರ್ಕಾರಕ್ಕೆ ಏನು ಕಷ್ಟವಾಗಿತ್ತು.
ಇಪ್ಪತ್ತ ಮೂರು ಸಂಪುಟಗಳಲ್ಲಿ ದೇಶದ ಇತಿಹಾಸ, ಅರ್ಥ ಶಾಸ್ತ್ರ , ಅಸ್ಪೃಶ್ಯತೆ ಸಮಸ್ಯೆ, ಜಾತಿ ಪದ್ಧತಿ ಕುರಿತು ಅಖಂಡವಾಗಿ ಜ್ಞಾನ ತಪಸ್ಸು ಮಾಡಿ ಬರೆದ ಅಂಬೇಡ್ಕರ್ ಅವರ ಜೀವ ದೇಹಬಿಟ್ಟದ್ದು ಹೇಗೆ? ಆಗ ಅವರಿಗೆ 65 ವಯಸ್ಸು ಅವರ ಸಾವಿನ ನಂತರ ಮೊದಲು ಅವರ ಎರಡನೇ ಪತ್ನಿ ಸವಿತಾ ಅಂಬೇಡ್ಕರ್ (ಮೊದಲು ಶಾರದಾಕಬೀರ್) ಅವರ ನಡವಳಿಕೆ ಅನುಮಾನಾಸ್ಪದ ಎಂದು ಆಗಿನ ಮುಖಂಡರಾದ ಬಿ.ಸಿ.ಕಾಂಬ್ಳೆ ಮುಂತಾದವರು ಒತ್ತಾಯಿಸಿದ್ದರು. ಇದು ನಿಮ್ಮನ್ನ ವರ್ಗದವರಿಗೆ ದುಃಖದ ಸಂಗತಿಯೂ ಹೌದು! ಪಾರ್ಲಿಮೆಂಟ್ವರೆಗೂ ಬೆಳಕು ಚೆಲ್ಲಿದರು! ಕೇಂದ್ರ ಗೃಹಮಂತ್ರಿ ಗೋವಿಂದ ವಲ್ಲಭ ಪಂತರು ಏಕವ್ಯಕ್ತಿ ಆಯೋಗ ರಚಿಸಿದರು. ಅದರ ಮುಖ್ಯಸ್ಥ ಡಿ.ಐ.ಜಿ. ಸಕ್ಸೇನಾ ಆಗಿದ್ದರು. ಆತ ವರದಿಸಿದ್ದಪಡಿಸಿ ಸರಕಾರಕ್ಕೆ ವರದಿಕೊಟ್ಟರು.ಅದು ಏನು ವರದಿ ಎಂಬುದು ಇಂದಿಗೂ ನಿಗೂಢವಾಗಿದೆ ಅದರ ಬಗ್ಗೆ ಎಷ್ಟು ಒತ್ತಾಯಿಸಿದರು ಸಾರ್ವಜನಿಕವಾಗಿ ಪ್ರಕಟವಾಗಲಿಲ್ಲ!
ಈ ಬಗ್ಗೆ ಮಹಾರಾಷ್ಟ್ರದ ಸಂಶೋಧಕ ಡಾ.ವಿಲಾಸ್ ಖರಾತ್ ಬರೆಯುತ್ತಾರೆ. ಸವಿತಾ ಅಂಬೇಡ್ಕರ್ ಅವರಿಗೆ ಸ್ವತಃ ಪತ್ನಿ ಮತ್ತು ವೈದ್ಯೆಯಾದರೂ ಅಂಬೇಡ್ಕರ್ ಅವರ ಆರೋಗ್ಯದ ಬಗ್ಗೆ ಕೊಂಚೂ ಕಾಳಜಿ ಇರಲಿಲ್ಲ. ಅಂಬೇಡ್ಕರ್ ಅವರ ಆಪ್ತರಾಗಿದ್ದ ಸೋಹನ ಲಾಲ್ ಶಾಸ್ತ್ರಿ 1949ರಲ್ಲಿ ಕಣ್ಣಾರೆ ಕಂಡ ಘಟನೆಯನ್ನು ತಿಳಿಸಿದ್ದಾರೆ
ಸವಿತಾ ತಂದೆ ಕೆ.ವಿ.ಕಬೀರ್, ಆಕೆಯ ಸಹೋದರ ಬಾಳೂ ಕಬೀರ ಇವರು ದೆಹಲಿಯ ಅಂಬೇಡ್ಕರ್ ನಿವಾಸದಲ್ಲಿ ಆರು ತಿಂಗಳ ಕಾಲ ಇದ್ದರು. ಈ ಕುರಿತು ಡಾ.ಬರಾತ್ ಹೇಳುವುದು ಕೇಳಿ – “ಒಮ್ಮೆಯಂತೂಆ ತಾಯಿಯು (ಸವಿತಾ ಅಂಬೇಡ್ಕರ್) ಬೇಸಿಗೆಯ ಕಾಲದಲ್ಲಿ ಬಾಬಾಸಾಹೇಬ್ರವರಿಗೆ ಕುದಿಸಿದ ಗೋವಿನ ಜೋಳದ ಕಾಳುಗಳನ್ನು ತಿನ್ನುವಂತೆ ಒತ್ತಾಯಿಸಿ ಹಠ ಹಿಡಿದರು. ಆ ಸಂದರ್ಭದಲ್ಲಿ ಸೋಹನಲಾಲ ಶಾಸ್ತ್ರೀಯವರು ಅಲ್ಲಿಯೇ ಇದ್ದರು. ಬೇಸಿಗೆ ವಾತಾವರಣವನ್ನು ನೆನಪಿಸಿಕೊಂಡು ಅಂಥ ಆಹಾರವನ್ನು ಕೊಡುವುದು ಅವರ ಆರೋಗ್ಯಕ್ಕೆ ಹಾನಿಕಾರಕವೆನ್ನುತ್ತಿದ್ದಂತಿಯೆ “ನೀವೊಬ್ಬರು! ಡಾಕ್ಟರ್ ಆಗುವುದು ಬಾಕಿ ಉಳಿದಿದೆ” ಎಂದು ಸಿಟ್ಟಿನಿಂದ ಹೇಳಿದರು ಮತ್ತು ತಿನ್ನುವಂತೆ ಒತ್ತಾಯಿಸಿ ಬಾಬಾಸಾಹೇಬರಿಗೆ ಅದನ್ನೇ ಬಡಿಸಿದರು. ಆದರಿಂದ ಬಾಬಾಸಾಹೇಬರ ಹೊಟ್ಟೆಯಲ್ಲಿ ತಾಳಿಕೊಳ್ಳಲಾರ ದಂತಹ ನೋವು ಕಾಣಿಸಿಕೊಂಡಿತು.ರಾತ್ರಿಯೆಲ್ಲವೂ ಅವರು ಅಸ್ವಸ್ಥತೆಯಿಂದ ಬಳಲಿದರು. ಆ ಕುದಿಸಿದ ಕಾಳುಗಳನ್ನು ತಿಂದ ಕಾರಣ ಅತಿಸಾರ ಉಂಟಾಯಿತು. ಸೋಹನಲಾಲ ಶಾಸ್ತ್ರೀ ಯವರು ಆಸ್ಪತ್ರೆಗೆ ಸೇರಿಸಲು ಒತ್ತಾಯಿಸಿದಾಗ ಸವಿತಾ ಅವರು ಅದನ್ನು ವಿರೋಧಿಸಿದರು.
ಸೋಹನಲಾಲ ಅಂಬೇಡ್ಕರ್ರೊಂದಿಗೆ 25 ವರುಷದ ಗೆಳೆತನದ ಕುರುವಾಗಿ, ಅವರು ಈ ಘಟನೆಯ ಹಿನ್ನೆಲೆಯಲ್ಲಿ ಸವಿತಾ ಅಂಬೇಡ್ಕರ್ ವ್ಯಕ್ತಿತ್ವದ ಒಳಸುಳಿಗಳನ್ನು ಅನಾವರಣ ಮಾಡಿದ್ದಾರೆ. ಅರವತ್ತು ವಯಸ್ಸು ಮತ್ತು ಮಧುಮೇಹವೆಂಬ ಹಳೆಯ ರೋಗದಿಂದ ಬಳಲುತ್ತಿದ್ದ ರೋಗಿಗೆ ಬೇಸಿಗೆ-ಮಳೆಗಾಲದಲ್ಲಿ ಕುದಿಸಿದ ಮೆಕ್ಕೆಜೋಳದ ಕಾಳುಗಳನ್ನು ಸೇವಿಸಲು ಕೊಡುವುದು ಅದೆಂತಹ ಬುದ್ಧಿಮತ್ತೆಯ ಕಾರ್ಯ?
ಸೋಹನಲಾಲ ಶಾಸ್ತ್ರಿ ಬರೆದಿರುವ ಮುಂದಿನ ಮಾತುಗಳನ್ನು ಓದಿ ನಾನು ಗಾಬರಿಯಾದೆ. ನೀವೂ ಉಸಿರು ಬಿಗಿ ಹಿಡಿಯ ಬೇಕಾದೀತು. ಮುಂದೆ ಓದಿ; “ನಾನು ಸತ್ಯವಾಗಿ ಹೇಳುತ್ತೇನೆ. ಬಾಬಾಸಾಹೇಬರ ಜೀವನದ ಅಂತ್ಯವು 1956ರಲ್ಲಿಯೆ ಪೂರ್ಣವಾಗುತ್ತಿತ್ತು”. ಇಲ್ಲಿಂದ 1956ರವರೆಗಿನ ಘಟನೆಗಳು ಭಯಾನಕವಾಗಿದೆ. ಒಂದು ಕಡೆ ಸಂವಿಧಾನ ನಿರ್ಮಾಣದ ಪ್ರಮುಖ ಹೊಣೆ, ಇನ್ನೊಂದು ಕಡೆ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವ ಭೀಮಸಾಹಸ ಆದರೆ ಅದೇ ಸಮಯಕ್ಕೆ ಡಾ.ಮಾಧವ ಜಿ. ಮಾಲವಣಕರ ಎಂಬ ತಮ್ಮ ವೈದ್ಯ ಮತ್ತು ತಮ್ಮ ವೈದ್ಯ ಪತ್ನಿಯ ಬಗ್ಗೆ ಅಂಬೇಡ್ಕರ್ ರೋಸಿ ಹೋಗಿದ್ದರು.
ತಮ್ಮ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಬಾಬಾಸಾಹೇಬರ ಆಪ್ತರಾದ ಭಾವುರಾಮ ಗಾಯಕವಾಡ, ಕಮಲಾಕಾಂತ ಚಿತ್ರೆ, ಡಿ.ಜಿ. ಜಾಧವರೊಡನೆ ಪತ್ರಗಳ ಮುಖಾಂತರ ಹಂಚಿಕೊಂಡಿದ್ದರು . ಚಿತ್ರೆಯವರು ಬಾಬಾಸಾಹೇಬರನ್ನು ಹೆಚ್ಚು ಮಾತನಾಡಿಸದಂತೆ ಸವಿತಾ ಅವರು ವ್ಯವಸ್ಥೆ ಮಾಡಿದ್ದರು. “ಈ ಮೊದಲು ನಾನು ಅವರೊಂದಿಗೆ ಪ್ರತಿದಿನ ತಾಸುಗಟ್ಟಲೆ ಮಾತನಾಡುತ್ತ ಕುಳಿತಿರುತ್ತಿದ್ದೆ. ಆದರೆ ಈಗ ಕೆಲಸದ ಹೊರತಾಗಿದೆ. ಕೆಲವರಿಗೆ ಬಾಬಾಸಾಹೇಬರನ್ನು ಸಂಪರ್ಕಿಸುವುದು ಕಷ್ಟವಾಯಿತು”.
ಅಂಬೇಡ್ಕರ್ ಅವರ ನಿಷ್ಟಾವಂತ ಅನುಮಾಯಿಗಳಲ್ಲಿ ಒಬ್ಬರಾದ ಶಂಕರಾನಂದ ಶಾಸ್ತ್ರಿ ‘ಮೈಮೆಮೊರೀಸ್ ಅಂಡ್ ಎಕ್ಸ್ಪೀರಿಯನ್ಸ್ ಆಫ್ ಅಂಬೇಡ್ಕರ್’ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಸುಮಾರು ಹದಿಮೂರು ಸಲ ಅಂಬೇಡ್ಕರ್ ಹತ್ಯೆ ಪ್ರಯತ್ನ ನಡೆದಿತ್ತು ಎಂದು ಬರೆದಿದ್ದಾರೆ. ಬರೋಡದಲ್ಲಿ ಉದ್ಯೋಗಕ್ಕೆ ಹೋದಾಗ (1918) ಮಹಾಡ್ ಚೌಡರ್ಕೆರೆ ನೀರು ಕುಡಿಯುವ ಹೋರಾಟದ ಸಂದರ್ಭದಲ್ಲಿ (ಮಾರ್ಚ್ 1927) ಮುಂಬಾದೇವಿ ದೇಗುಲ ಪ್ರವೇಶ ಪ್ರಯತ್ನ (1928) ನಾಸಿಕದ ಕಾಳರಂ ದೇವಾಲಯ ಪ್ರವೇಶ ಯತ್ನ (3-3-1930) ಮೊದಲಾದ ಅಸ್ಪೃಶ್ಯತೆ ನಿವಾರಿಸುವ ಹೋರಾಟಗಳ ಸಮಯದಲ್ಲಿ ಅವರ ಹತ್ಯಗೆ ಪ್ರಯತ್ನ ಮಾಡಲಾಗಿತ್ತು ಎಂಬ ಉಲ್ಲೇಖವಿದೆ.
ರಾಷ್ಟ್ರಮಟ್ಟದ ರಾಜಕಾರಣ ತೆಗೆದುಕೊಂಡರೆ, ಕಮ್ಯುನಲ್ ಅವಾರ್ಡ್ ವಿವಾದದ ಸಮಯದಲ್ಲಿ ಗಾಂಧಿ ಅನುಯಾಯಿಗಳು ಮಹಾತ್ಮರೇನಾದರೂ ಈ ಸಂದರ್ಭದಲ್ಲಿ ಮೃತರಾದರೆ ಗಾಂಧೀಜಿಯವರ ಶವವನ್ನು ಸುಡುವ ಮೊದಲು ನಿಮ್ಮನ್ನು ಕೊಂದು ಬಿಸಾಡುತ್ತೇವೆ ಎಂಬ ಅರ್ಥ ಬರುವಂತೆ ಬೆದರಿಕೆ ಪತ್ರಗಳನ್ನು ಅಂಬೇಡ್ಕರ್ಗೆ ಬರೆದಿದ್ದರು.
ಒಟ್ಟಾರೆಯಾಗಿ ವಿಲಾಸ್ ಬರಾತ್ ಎತ್ತಿರುವ ಈ ಪ್ರಶ್ನೆಗಳು ಯೋಚಿಸಲು ಲಾಯಕ್ಕಾಗಿದೆ. ಶ್ರೀಪಾದ ಡಾಂಗೆ ಹಾಗೂ ನಾಥ ಪೈಯವರು ಬಾಬಾ ಸಾಹೇಬರ ರಕ್ತ ಸಂಬಂಧಿಗಳಾಗಿದ್ದರೇನು? ಅಥವಾ ಬಾಬಾ ಸಾಹೇಬರು ಅವರನ್ನು ಉತ್ತರಾಧಿಕಾರಿಗಳೆಂದು ನೇಮಿಸಿಕೊಂಡಿದ್ದರೇನು? ಹಾಗೇನೂ ಇಲ್ಲವಲ್ಲ. ನೆಹರು ಹಾಗೂ ಪಂತರು ವರದಿಯನ್ನು ತೋರಿಸಬಾರದೆಂಬುದಕ್ಕಾಗಿಯೇ ಡಾಂಗೆ ಮತ್ತು ಪೈರನ್ನು ಬಳಸಿಕೊಂಡರು ಸವಿತಾ ಅವರಿಂದ ಬೇಸತ್ತು ಡಾ.ಅಂಬೇಡ್ಕರ್ ಕೆಲವೇ ದಿನಗಳಲ್ಲಿ ಅವರಿಗೆ ವಿಚ್ಛೇದನ ನೀಡುವರಿದ್ದರು ಎಂಬುದು ಅನೇಕ ಆಪ್ತರಿಗೆ ಗೊತ್ತಿತ್ತು. ಪುಸ್ತಕ ಎರಡು ಸಂಪುಟಗಳಲ್ಲಿ ಮರಾಠಿಯಲ್ಲಿ ಬಂದಿವೆ. ಒಟ್ಟಾರೆಯಾಗಿ ವಿಭೂತಿ ಪುರುಷರ ಬದುಕು ಹೀಗೆ ಅಲ್ಲವೇ? ಆದಕಾರಣ ‘ಶರಣರನ್ನು ಮರಣದಲ್ಲಿ ಕಾಣು’ ಅನ್ನುವುದು ಅಂಬೇಡ್ಕರ್ ಬದುಕು ಕೂಡ ಸೇರಿ ಹೋಯಿತು. ಸುಧೀರ್ಘವಾದ ಅವತರಣೆಯನ್ನು ಪ್ರಸ್ತಾಪದಲ್ಲಿ ಜಗತ್ತಿನಲ್ಲಿ ಬದುಕು ನಡೆಸಿದ ಭೂಗೋಳದ ವಿವಿಧ ಭಾಗದ, ವಿವಿಧ ಧರ್ಮದ, ವಿವಿಧ ವ್ಯಕ್ತಿತ್ವದ ವಿಭೂತಿ ಪುರುಷರು ಜಗತ್ತಿಗೆ ಅರಿವಿನ ತೋರಣ ತೊಡಿಸಿದರು. ಅವರ ಗ್ರಹಿಕೆಯಲ್ಲಿ ಸಿದ್ಧಾಂತ- ಪ್ರತಿ ಸಿದ್ಧಾಂತದ ಒಡಲಲ್ಲಿ ಗಂಭೀರವಾದ ಸಂಗತಿಗಳ ಬಡತನ ಹಸಿವು, ಅಜ್ಞಾನ, ತಾರತಮ್ಯ ನಿವಾರಣೆ ಅವರುಗಳು ಪ್ರಯತ್ನಿಸಿದರು. ಆದರೆ ಅವರೆಲ್ಲಾ ಒಂದು ರೀತಿಯ ದುಃಖ-ಸಂಕಟಕ್ಕೆ ಒಳಗಾಗಿದ್ದರು ಎಂಬುದನ್ನು ತಿಳಿಯುತ್ತಲೇ ಭಾರತದಂತಹ ಬಹುಸಂಸ್ಕೃತಿ, ಬಹು ಜಾತಿಯ ಪ್ರಧಾನ ರಾಷ್ಟ್ರದ ಸಮಾನತೆಗೆ ಮೀಸಲಾತಿಯ ಅನ್ನ ಹಂಚಿಕೊಳ್ಳಲು ತಾರತಮ್ಯ ನಡೆದಿದೆ ಎನ್ನುವುದು ಅಷ್ಟೇ ಮುಖ್ಯವಾದ ಸಂಗತಿಯಾಗಿದೆ. ಹೀಗಾಗಿ ಮೀಸಲಾತಿ ಎಂಬ ಸಂಗತಿ ನಿಜವಾಗಿ ಹಿಂದುಳಿದಿರುವ ಪರಿಶಿಷ್ಠ ಜಾತಿಗಳ ಮಧ್ಯೆ ನಡೆಯುವ ಕದನವಾಗಿದೆ. ಇದು ಭಾರತದ ಒಂದು ರಾಜ್ಯದ ಕತೆಯಲ್ಲಾ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ, ಬಿಹಾರ ಮುಂತಾದ ರಾಜ್ಯಗಳಲ್ಲಿ ಈ ಸಂಗತಿಗಳು ಭುಗಿಲೆದ್ದು ಅನೇಕ ಅನಾವುತಗಳಿಗೆ ಕಾರಣವಾಗಿ ಬೂದಿಮುಚ್ಚಿದ ಕೆಂಡದಂತೆ ಇರುವ ಪ್ರಕರಣವಾಗಿ ಬಿಟ್ಟಿದೆ.
ಜೀಸಸ್, ಪೈಗಂಬರ್, ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಪರಿವರ್ತನಕಾರರು ಸಮಾಜಕ್ಕೆ ಒಳ್ಳೆಯದು ಮಾಡಿದರೂ ಸಮಾಜವನ್ನು ಎಷ್ಟು ಗೌರವಿಸಿದರೋ ಅಷ್ಟೇ ಪ್ರಮಾಣದಲ್ಲಿ ನೋವು ಕೊಟ್ಟದ್ದು ನಿಜ! ಇಂಥವರ ಬದುಕಿನ ಯಾನ ಜನ ಸಾಮಾನ್ಯರ ಒಡಲ ಕಥನದ ನಡೆಗೆ ನಡೆಯೋಣ. ಧರ್ಮಗಳು ಅನ್ನುವುದಕ್ಕಿಂತ ಮಾನವಪರ, ಜೀವಪರ, ನೊಂದವರ, ಹತಭಾಗ್ಯರ ಮೂಕರೋಧನೆಯನ್ನು ಆದಿಮ ಕಾಲದಿಂದಲೂ ನವನಾಗರೀಕತೆಯ ಇವತ್ತಿನವರೆಗೂ ಸಂಕಟ-ದುಃಖ-ದುಮ್ಮಾನ ಸಮಾಜದಲ್ಲಿ ಮಡುಗಟ್ಟಿದೆ. ಇಂತಹ ಸಮಸ್ಯೆಗಳಿಗೆ ಇವೊತ್ತಿನ ಸಂವಿಧಾನದಲ್ಲಿ ಎಲ್ಲಾ ರೀತಿಯ ಪರಿಹಾರಗಳು ಉಂಟು. ಆದರೆ ಇದುವರೆಗೂ ನಮ್ಮನ್ನಾಳಿದ ಸರಕಾರಗಳು ಸರಿಯಾದ ರೀತಿಯಲ್ಲಿ ಪರಿಗ್ರಹಿಸದೆ ಇರುವುದು ಒಂದು ದುರಂತವಾಗಿ ಕಂಡುಬರುತ್ತಿದೆ. ಅಕ್ಷರ ಲೋಕದ ಮತಿಹೀನರು ಭಾರತೀಯ ಸಮಾಜವನ್ನು ನವನೀತಿಯ ಮನಸ್ಸಿನಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಭಾರತವು ಭೀಗುತ್ತ-ಭೀಗುತ್ತ ಅಸಹಾಯಕತೆಯ ಆದಿಮ ಜನರ ಮೂಕರೋಧನೆ ಜೀವಂತವಾಗಿಯೇ ಉಳಿದುಕೊಂಡಿದೆ. ಅದಕ್ಕೆ ಸಮಾಜ, ಸರ್ಕಾರ, ನಮ್ಮನ್ನು ಆಳುವ ಪ್ರಭುಗಳು ಬುದ್ಧಿಹೀನ ರಾಗದೆ, ಅಧಿಕಾರ ರೂಢ ಮನಸ್ಸನ್ನು ರೂಢಿಸಿಕೊಂಡರೆ ಉತ್ತಮ ದಾರಿ ನಿರ್ಮಾಣವಾಗುತ್ತಿದೆ ಅಲ್ಲವೆ!
– ಪ್ರೊ.ಎಚ್.ಲಿಂಗಪ್ಪ
ಲೇಖಕರು ಮತ್ತು ಸಾಹಿತಿಗಳು ಹಾಗೂ ಜಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸಮ್ಮೇಳನದ ಸರ್ವಾಧ್ಯಕ್ಷರು
ತೋರಣಗಟ್ಟೆ