ಪ್ರಜಾ ನಾಯಕ ಸುದ್ದಿ ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಸಂಸ್ಥೆಯ ಮಾಜಿ ಅಧ್ಯಕ್ಷ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ತಂದೆಯ ಪರವಾಗಿ ಲಂಚ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಅವರನ್ನು ಮಾರ್ಚ್ 2ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಕರಣದ ಮೊದಲನೇ ಆರೋಪಿಯಾಗಿದ್ದ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಶಾಸಕರು ಜಾಮೀನು ಕೋರಿ ಸಲ್ಲಿಸಿದ್ದ ಮುಖ್ಯ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು, ವಿರೂಪಾಕ್ಷಪ್ಪ ಪತ್ತೆಗೆ ಶೋಧ ಆರಂಭಿಸಿದ್ದರು. ಬೆಂಗಳೂರಿನ ಮನೆ, ಚನ್ನಗಿರಿಯ ಚನ್ನೇಶಪುರದ (ಮಾಡಾಳ್) ಮನೆ ಸೇರಿ ಹಲವಡೆ ಲೋಕಾಯುಕ್ತ ಪೊಲೀಸರು ಶೋಧ ಆರಂಭಿಸಿದ್ದರು. ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಚನ್ನಗಿರಿಯಿಂದ ಹೊರಟಿದ್ದ ವಿರೂಪಾಕ್ಷಪ್ಪ ಬೆಂಗಳೂರಿನತ್ತ ಬರುತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸ್ ಅಧಿಕಾರಿ ಗಳ ತಂಡವೊಂದು ತುಮಕೂರಿನ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ಶಾಸಕರ ಕಾರನ್ನು ಅಡ್ಡಗಟ್ಟಿತು. ಅಲ್ಲಿಂದಲೇ ಅವರನ್ನು ಬಂಧಿಸಿ, ಬೆಂಗಳೂರಿಗೆ ಕರೆತರಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಪಡೆಯಬೇಕಿರುವುದರಿಂದ ಶಾಸಕರನ್ನು ವಿಚಾರಣೆ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ