ಪ್ರಜಾ ನಾಯಕ ವಿಶೇಷ ಸುದ್ದಿ -: ಸಂವಿಧಾನದ ಶಿಲ್ಪಿ, ಶೋಷಿತರ ಆಶಾಕಿರಣ, ಭಾರತರತ್ನ, ವಿಶ್ವಜ್ಞಾನಿ, ಮಹಾಮಾನವ ತಾವಾದಿ .ಹೀಗೆ ಸಾಲು ಸಾಲು ಗೌರವಗಳಿಗೆ ಪಾತ್ರರಾಗಿರುವ ಡಾ: ಬಿ.ಆರ್.ಅಂಬೇಡ್ಕರ್ ಅವರು 14 ನೇ ಏಪ್ರಿಲ್ 1891 ರಲ್ಲಿ ಜನಿಸಿದರು.ಇವರು ರಾಮಜಿ ಮತ್ತು ಭೀಮಾಬಾಯಿಯವರ 14ನೇ ಮಗುವಾಗಿದ್ದರು ಅವರ ಮೊದಲ ಹೆಸರು ಭೀಮರಾವ್ ಇವರು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಯಾರು ಇವರ ಪ್ರತಿಭೆಯನ್ನು ಗುರುತಿಸಲಿಲ್ಲ ಆದರೆ ಇವರಿಗೆ ಬೋಧಿಸುತ್ತಿದ್ದ ಫೆಂಡೆಸೆ ಅಂಬೇಡ್ಕರ್ ಎನ್ನುವ ಶಿಕ್ಷಕರು ಇವರ ಪ್ರತಿಭೆಯನ್ನು ಗುರುತಿಸಿ, ಕಲಿಕೆಯನ್ನು ಪ್ರೋತ್ಸಾಹಿಸಿ ಭೀಮರಾವ್ ರವರ ಹೆಸರಿಗೆ ತಮ್ಮ ಹೆಸರನ್ನು ಸೇರಿಸಿ ಹಾಜರಾತಿಯಲ್ಲಿ ಭೀಮರಾವ್ ರಾಮ್ ಜೀ ಅಂಬೇಡ್ಕರ್ ಎಂದು ತಿದ್ದಿದರು. ಮುಂದೆ ಇದೇ ಬಾಲಕ ವಿಶ್ವದಲ್ಲೇ ಅತ್ಯುತ್ತಮವಾದ ಭಾರತದ ಸಂವಿಧಾನವನ್ನು ರಚಿಸಿ ಸಂವಿಧಾನದ ಶಿಲ್ಪಿ ಯಾದರು.
ಈ ನೆಲದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿಯು ಮೂಲಭೂತ ಹಕ್ಕನ್ನು ಹೊಂದಿದ್ದಾನೆ. ಅದನ್ನು ಅನುಸರಿಸುತ್ತ ಜೀವನ ಸಾಗಿಸ ಬೇಕು ಎಂಬುದನ್ನು ಪ್ರತಿಪಾದಿಸಿದವರು ಹಾಗೂ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎನ್ನುವಂತೆ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು ಪ್ರಜಾಪ್ರಭುತ್ವ ಎಂದಾಗ ಕೇವಲ ಸರ್ಕಾರ ಎಂದಷ್ಟೇ ಅಲ್ಲ ಪ್ರತಿಯೊಬ್ಬರು ಜಾತಿ, ವರ್ಗ, ವರ್ಣ, ಭಾಷೆ, ಲಿಂಗ ತಾರತಮ್ಯವನ್ನು ಮರೆತು ಹೊಂದಿಕೊಂಡು ಸಮನ್ವಯ ಸಾಮರಸ್ಯ ಜೀವನ ನಡೆಸುವ ಕ್ರಮ. ಅಂದರೆ ಪ್ರಜಾಪ್ರಭುತ್ವದಲ್ಲಿ ವಿಶ್ವಾತ್ಮಯ ವಿಶ್ವಪ್ರಜ್ಞೆ ಎಂಬುದೊಂದು ಭಾವನಾತ್ಮಕ ಮತ್ತು ಬೋಧನಾತ್ಮಕ ಆಕರ್ಷಣೆಯಲ್ಲ ಬದಲಾಗಿ ಅದೊಂದು ಸಂವೇದನಾಶೀಲ ಪ್ರಜ್ಞೆಯಾಗಿದೆ.
ಸ್ವತಂತ್ರ ಪೂರ್ವದಲ್ಲಿ ಅಂದರೆ ಬ್ರಿಟೀಷರ ಆಳ್ವಿಕೆಯ ಸಂದರ್ಭದ ಲ್ಲಿ ಪಾಕಿಸ್ತಾನ ಭಾರತ ದೇಶಕ್ಕೆ ಸೇರಿತ್ತು. ಮಹಮ್ಮದ್ ಆಲಿ ಜಿನ್ನಾ ರವರ ಮುಂದಾಳತ್ವದ ಮುಸ್ಲಿಂ ಲೀಗ್ ಬ್ರಿಟಿಷರ ಹತ್ತಿರ ಪ್ರಬಲ ವಾದ ಬೇಡಿಕೆಯನ್ನು ಮಂಡಿಸಿ ಭಾರತಕ್ಕೆ ಹೊಂದಿಕೊಂಡಿ ದ್ದ ಪಾಕಿಸ್ತಾನವನ್ನು ಹೊಸ ದೇಶವನ್ನಾಗಿ ಸ್ಥಾಪಿಸಿಕೊಂಡರು. ಇದೇ ಸಂದರ್ಭದಲ್ಲಿ ದಲಿತರಿಗಾಗಿ ನೀವು ಒಂದು ಹೊಸ ದೇಶ ಕೇಳಿ ದರೆ ಭಾರತವನ್ನು ವಿಭಜಿಸಿ ಕೊಡುತ್ತೇವೆ ಅದಕ್ಕೆ ನೀವು ಬದುಕಿರು ವವರೆಗೂ ಪ್ರಧಾನಮಂತ್ರಿಗಳಾಬಹುದು, ಎಂಬ ಬ್ರಿಟಿಷರ ತಾಕೀತನ್ನು ಅಪ್ಪಟ ದೇಶಪ್ರೇಮಿಯೂ ಹಾಗೂ ಪ್ರಜ್ಞಾಪೂರ್ವ ಮುಂದಾಲೋಚನಗಾರರೂ ಆಗಿದ್ದ ಡಾ ಬಿ. ಆರ್. ಅಂಬೇಡ್ಕರ್ ರವರು ತಿರಸ್ಕರಿಸಿ, ನಾನು ಅಖಂಡ ಭಾರತದಲ್ಲಿ ಉಳಿಯುತ್ತೇನೆ ಯಾವುದೇ ಕಾರಣಕ್ಕೂ ನನ್ನ ಈಗಿನ ಭಾರತವನ್ನು ವಿಭಜಿಸಲು ನಾನು ಇಷ್ಟಪಡುವುದಿಲ್ಲ ಎಂದರು.
ಅಷ್ಟೇ ಅಲ್ಲದೆ ಅವರು ಸಂವಿಧಾನ ರಚನಾ ಕಾರ್ಯದಲ್ಲಿ ತೊಡಗಿ ದ್ದಾಗ ಬೇರೆ – ಬೇರೆ ಜಾತಿ, ಧರ್ಮಗಳಿಗೆ ಬೇರೆ – ಬೇರೆ ಅವಕಾಶ ಗಳನ್ನು ಸಂವಿಧಾನದಲ್ಲಿ ಸೇರಿಸಲು ಸಾಕಷ್ಟು ಸಲಹೆಗಳು ಬಂದವು. ಆದರೆ ಇವರು ಇಂತಹ ಸಲಹೆಗಳನ್ನು ಸ್ವೀಕರಿಸದೆ ಭಾರತದಲ್ಲಿ ವಾಸಿಸುವ ಎಲ್ಲಾ ಧರ್ಮ, ಲಿಂಗ, ಜಾತಿಗಳಿಗೂ ಒಂದೇ ಜಾತ್ಯತೀತ ಸಂವಿಧಾನ ರಚಿಸಿದರು”. ಭಾರತ ದೇಶದ ಏಕತೆಯನ್ನು ಎತ್ತಿ ಹಿಡಿದು ಭಾರತದ ಸಾಮಾಜಿಕ ಸಮಾನತೆ ಯನ್ನು ಕಾನುನಾತ್ಮಕವಾಗಿ ಸಿಂಧುಗೊಳಿಸಿದ ಸಂವಿಧಾನದ ಶಿಲ್ಪಿ ಇವರು.ಜ್ಯೋತಿಬಾ ಪುಲೆ ಮತ್ತು ಸಾವಿತ್ರಿಬಾ ಪುಲೆ ಅವರ ಬಳಿಕ ಭಾರತದಲ್ಲಿ ಮಹಿಳಾ ಸ್ವಾತಂತ್ರ ಮತ್ತು ಮಹಿಳಾ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳುವುದರ ಜೊತೆಗೆ ಮಹಿಳೆಯರಿಗೂ ಪುರುಷರ ಸಮಾನವಾದ ಹಕ್ಕುಗಳನ್ನು ಕಾನೂನಾತ್ಮಕ ನೆಲೆಯಲ್ಲಿ ಒದಗಿಸಿಕೊಟ್ಟು ಮತ ಚಲಾಯಿಸುವ ಅವಕಾಶ ಕಲ್ಪಿಸಿದರು ಹಾಗೂ ಮಹಿಳಾ ಸಿಬ್ಬಂದಿಗಳಿಗೆ ತಾಯ್ತಾನದ ಹೆರಿಗೆ ರಜೆಯನ್ನು ಮತ್ತು ರಾತ್ರಿ ಪಾಳಿ ಕೆಲಸದಿಂದ ಮುಕ್ತಿಯನ್ನು ದೊರಕಿಸಿದರು.
ಹೀಗೆ ಅವರು ನಮಗೆ ನೀಡಿದಂತಹ ಮಹತ್ತರವಾದ ಸಂವಿಧಾನ ವನ್ನು ಗೌರವಿಸಿ ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ. ಇಂದು ಮಹಿಳೆಯರಾದ ನಾವೆಲ್ಲ ಉನ್ನತ ವ್ಯಾಸಂಗ ಮಾಡುತ್ತಿದ್ದೇವೆ,ಎಲ್ಲಾ ಕ್ಷೇತ್ರದಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದೇವೆ, ದೇಶದ ಚುಕ್ಕಾಣಿಯನ್ನು ಹಿಡಿದು ಆಡಳಿತ ನಡೆಸುತ್ತಿದ್ದೇವೆ ಎಂದರೆ ಅದರ ಹಿಂದಿರುವ ಬೆನ್ನ ಹಿಂದಿನ ಬೆಳಕಂತೆ ಪ್ರಜ್ವಲಿ ಸುವ ಮಹಾನ್ ಚೇತನ ಅಂಬೇಡ್ಕರವರ ಫಲಶೃತಿಯಾಗಿದೆ ಅವರು ನಮಗಾಗಿ ನೀಡಿದ ಹಕ್ಕು ಹಾಗೂ ಕರ್ತವ್ಯಗಳನ್ನು ನಾವು ಇಂದು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿ ದೇಶದ ಪ್ರಗತಿಗೆ ಮಾರಕವಾಗುತ್ತಿದ್ದೇವೆ.ಹಕ್ಕುಗಳನ್ನು ಚಲಾಯಿಸಲು ಇರುವಂತಹ ನಮ್ಮ ಏರುಧ್ವನಿ ಕರ್ತವ್ಯಗಳನ್ನು ಪಾಲಿಸುವುದರಲ್ಲಿ ಇರುವುದಿಲ್ಲ, ಯಾವುದೊ ಒಂದು ಸಬೂಬು ಹೇಳಿ ನುಣುಚಿ ಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದರಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳಲ್ಲಿ ನಮ್ಮದು ಪಾಲಿದೆ ಎಂಬುದನ್ನು ಮರೆತು ಧ್ವಂಸ ಮಾಡುತ್ತಿದ್ದೇವೆ, ನಮ್ಮ- ನಮ್ಮಲ್ಲೇ ಜಾತಿ ಕೋಮುಗಲಭೆಗಳಂತಹ ಸಮಸ್ಯೆಗಳನ್ನು ಬೆಳೆಸಿ ಪೋಷಿಸುತ್ತಿದ್ದೇವೆ. ಸ್ತ್ರೀಯರನ್ನು ಇನ್ನೂ ಹಲವಾರು ರೀತಿಯ ತಾರತಮ್ಯದಲ್ಲಿಟ್ಟು ನೋಡುವ ದೃಷ್ಟಿಕೋನ ಬದಲಾಗಿಲ್ಲ, ಎನ್ನುವ ಕಹಿ ಸತ್ಯಗಳನ್ನು ನಾವು ಒಪ್ಪಲೇಬೇಕಾಗುತ್ತದೆ.ಇಂತಹ ತಾರತಮ್ಯಗಳ ನೀತಿಯಿಂದ ಹೊರಬಂದು ದೇಶವನ್ನು ಪ್ರಗತಿ ಯತ್ತ ಕೊಂಡೊಯ್ಯಲು ನಾವು ಕೈಜೋಡಿಸೋಣ ಎನ್ನುವ ಆಶಯದೊಂದಿಗೆ
ಭಾರತ ಸಂವಿಧಾನದ ಅಸ್ಮಿತೆಯನ್ನರಳಿಸಿದ ದಿವ್ಯ ಚೇತನಾ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ಪಾಂಡಿತ್ಯದ ಪ್ರಭೆಗೆ ನಮನಗಳನ್ನು ಸಲ್ಲಿಸುತ್ತಿದ್ದೇನೆ.
ಬಿ. ಟಿ. ಗೀತಾಮಂಜು ಶಿಕ್ಷಕರು ಹಾಗೂ ಸಾಹಿತಿಗಳು ಬೆಣ್ಣೆಹಳ್ಳಿ ಜಗಳೂರು ತಾಲೂಕು