ಪ್ರಜಾ ನಾಯಕ ಸುದ್ದಿ ದಾವಣಗೆರೆ :- ಯೋಗವು ನಮಗೆ ವ್ಯಾಯಮ, ಮಾತ್ರವಲ್ಲದೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡು ಹಿಡಿಯಲು ನೆರವಾಗುತ್ತದೆ ಎಂದು ಯೋಗ ಪಟುಗಳಾದ ಭರಮಪ್ಪ ಅವರು ಹೇಳಿದರು.
ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ವಸತಿ ಶಾಲೆಯಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ ಮನಸ್ಸು, ದೇಹ ಮತ್ತು ಆತ್ಮ ಸೇರಿದ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಮ್ಮ ಮತ್ತು ಪ್ರಕೃತಿ ಮಾತೆಯ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ ಎಂದರು.
ಯೋಗವು ನಮ್ಮನ್ನು ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ, ಜೀವನ ಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವುಂಟು ಮಾಡುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಶವಾಸನ, ಪದ್ಮಾಸನ, ಪಾದ ಹಸ್ತಾಸನಗಳನ್ನು ಮಾಡಿಸಿ, ಯೋಗಾಸನಗಳು, ಪ್ರಾಣಾಯಾಮ ಮತ್ತು ಷಟ್ ಕ್ರಿಯೆಗಳ ಮಹತ್ವವನ್ನು ಸಾರಿದರು.
ಪ್ರಾಂಶುಪಾಲರಾದ ಯತೀಶ್ ಆಚಾರ್ ಹಾಗೂ ಶಿಕ್ಷಕ ವರ್ಗ, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು