ಪ್ರಜಾ ನಾಯಕ ಸುದ್ದಿ ದಾವಣಗೆರೆ: ‘ಒಂದು ಕ್ಷೇತ್ರದಲ್ಲಿ ಗಟ್ಟಿ ಯಾಗಿ ನಿಲ್ಲಲು ಸಾಧ್ಯವಾಗದೇ ಇರುವ ವಿರೋಧ ಪಕ್ಷದ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಗ್ಯಾರಂಟಿ ಕಾರ್ಡ್ ಮೂಲಕ ಸುಳ್ಳು ಭರವಸೆಗಳನ್ನು ನೀಡುತ್ತಿದೆ. 70 ವರ್ಷಗಳ ಕಾಲ ಇವರೇನು ಕಡುಬು ತಿನ್ನುತ್ತಿದ್ದರಾ?’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಬಿಜೆಪಿಯ ‘ವಿಜಯ ಸಂಕಲ್ಪ ಮಹಾಸಂಗಮ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ನ ಸುಳ್ಳು ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ಇಂದು ಜನರಿಲ್ಲ’ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳಿಂದ ಒಂದು ದಿನವೂ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಮುಂದಿನ ಎರಡು ತಿಂಗಳು ನಮ್ಮ ಸಂಪೂರ್ಣ ಸಮಯವನ್ನು ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಮನೆ–ಮನೆಗೆ ತೆರಳಿ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಗಳು ನೀಡಿದ ಕಾರ್ಯಕ್ರಮಗಳನ್ನು ತಲುಪಿಸಲು ಮೀಸಲಿಡಬೇಕು’ ಎಂದು ಹೇಳಿದರು.
ಹಣ, ಹೆಂಡ, ತೋಳ್ಬಲ, ಅಧಿಕಾರದ ಬಲದಿಂದ ಹಾಗೂ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆ ಒಂದು ಕಾಲವಿತ್ತು. ಆದರೆ, ಇಂದು ಇಡೀ ದೇಶದ ಜನ, ಕರ್ನಾಟಕದ ಜನ ನರೇಂದ್ರ ಮೋದಿ ಕಡೆ ನೋಡುತ್ತಿದ್ದಾರೆ. ಎರಡು ತಿಂಗಳು ಹಳ್ಳಿ–ಹಳ್ಳಿಗಳಿಗೆ ಹೋಗಿ ಮೋದಿಯ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟು ಜನರ ಮನಸ್ಸನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನೀವು ಹೆಂಡತಿ–ಮಕ್ಕಳೊಂದಿಗೂ ಪರಿಶ್ರಮ ಪಡಬೇಕು. ಮುಂದಿನ ಚುನಾವಣೆಯಲ್ಲಿ ಮೋದಿ ಅವರನ್ನು ಗೆಲ್ಲಿಸಿ ಮತ್ತೆ ಪ್ರಧಾನಿ ಮಾಡಲು ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.
ಇದು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭವಲ್ಲ; ಇದು ವಿಜಯ ಯಾತ್ರೆಯ ಆರಂಭ. ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ’ ಎಂದು ಹೇಳಿದರು.
ಇಡೀ ವಿಶ್ವವೇ ಮೆಚ್ಚಿರುವ ವಿಶ್ವನಾಯಕ ನರೇಂದ್ರ ಮೋದಿ ಅವರು ನಮ್ಮ ನಾಯಕರಾಗಿದ್ದಾರೆ. ಆದರೆ, ಜೈಲಿಗೆ ಹೋಗಲಿಕ್ಕೆ ತಯಾರಾಗಿರುವ ರಾಹುಲ್ ಗಾಂಧಿ ಕಾಂಗ್ರೆಸ್ನವರಿಗೆ ನಾಯಕರಾಗಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿರುವ ಜನಸ್ತೋಮ ವನ್ನು ನೋಡಿ ಕಾಂಗ್ರೆಸ್ನವರ ಎದೆ ಢವ–ಢವ ಎಂದು ಹೊಡೆದುಕೊಳ್ಳುತ್ತಿದೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ರಾಷ್ಟ್ರದ್ರೋಹಿ ಪಿಎಫ್ಐ ಸಂಘಟನೆಯನ್ನು ನಮ್ಮ ಸರ್ಕಾರ ನಿಷೇಧಿಸಿತು. ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. ಮತಾಂತರ ನಿಷೇಧವನ್ನು ಜಾರಿಗೊಳಿಸಿತು. ಆದರೆ, ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರೆ ಪಿಎಫ್ಐ ಸಂಘಟನೆ ಮೇಲಿನ ನಿಷೇಧ ತೆರವುಗೊಳಿಸುವುದಾಗಿ ಹೇಳುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವುದಾಗಿ ಪ್ರತಿಪಾದಿಸುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಧೈರ್ಯವಿದ್ದರೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯಗಳನ್ನು ಸೇರಿಸಲಿ’ ಎಂದು ಸವಾಲು ಹಾಕಿದರು.
ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದ ಮೊದಲು ಶ್ರೀಕೃಷ್ಣ ವಿರಾಟರೂಪ ದರ್ಶನ ಮಾಡಿದಂತೆ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪವು ಪ್ರಜಾಪ್ರಭುತ್ವದ ವಿರಾಟ ದರ್ಶನದ ಮಹಾಸಂಗಮವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ‘ನಮ್ಮ ಅಶ್ವಮೇದ ಯಾಗದ ಕುದುರೆ 224 ಕ್ಷೇತ್ರಗಳಲ್ಲೂ ಸಂಚರಿಸಿ ದಾವಣಗೆರೆಗೆ ಬಂದಿದೆ. ಅದನ್ನು ತಡೆದು ನಿಲ್ಲಿಸುವ ಶಕ್ತಿ ಯಾರಿಗೂ ಇರಲಿಲ್ಲ’ ಎಂದರು.
ಚಾಮುಂಡೇಶ್ವರಿ, ಕೋಲಾರ, ಬಾದಾಮಿಯಲ್ಲಿ ಸೋಲುತ್ತೇನೆ ಎಂಬ ಭಯದಲ್ಲಿರುವ ನಾಯಕರಿಗೇ ಸುರಕ್ಷಿತವಿಲ್ಲದ ಪಕ್ಷದಲ್ಲಿ ಹಿಂಬಾಲಕರು ಗೆಲ್ಲಲು ಸಾಧ್ಯವೇ? ಕಾಂಗ್ರೆಸ್ ನಾಯಕರಿಗೇ ಸುರಕ್ಷಿತ ಕ್ಷೇತ್ರ ಇಲ್ಲವೆಂದ ಮೇಲೆ ಆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ?’ ಎಂದು ಅವರು ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.
ಒಡೆದು ಆಳುವ ನೀತಿಯನ್ನು ಬ್ರಿಟಿಷರಿಂದ ಬಳುವಳಿ ಪಡೆದಿರುವ ಕಾಂಗ್ರೆಸ್ನವರಿಂದ ಇನ್ನು ಮುಂದೆ ಒಡೆದು ಆಳಲು ಸಾಧ್ಯವಿಲ್ಲ. ಜಾತಿ, ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಸರ್ಕಾರ ಯೋಜನೆ ಗಳನ್ನು ರೂಪಿಸಿತ್ತು. ಆದರೆ, ನಮ್ಮ ಸರ್ಕಾರ ಎಲ್ಲಾ ಸಮುದಾ ಯಕ್ಕೂ ಅನ್ವಯವಾಗುವಂತಹ ಯೋಜನೆಗಳನ್ನು ರೂಪಿಸಿದೆ’ ಎಂದು ಪ್ರತಿಪಾದಿಸಿದರು.
ಹಿಂದಿನ ಕುರುಕ್ಷೇತ್ರ ಯುದ್ಧ ಬಿಲ್ಲು, ಬಾಣಗಳೊಂದಿಗೆ ನಡೆದಿತ್ತು. ಇಂದು ಮಾತಿನ ಮೂಲಕ ನಡೆಯುತ್ತಿದೆ. ಈಗಿನ ಕುರುಕ್ಷೇತ್ರ ಯುದ್ಧದಲ್ಲಿ ಜನ ಮತದ ಮೂಲಕ ತಕ್ಕ ಉತ್ತರ ಕೊಡಬೇಕು’ ಎಂದರು.