ಪ್ರಜಾ ನಾಯಕ ಸುದ್ದಿ ಬಳ್ಳಾರಿ -: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಬಳ್ಳಾರಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಯುವತಿಯೋರ್ವರು ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ.
ಡಿ.ತ್ರಿವೇಣಿ ಸೂರಿ ರಾಜ್ಯದಲ್ಲೇ ಕಿರಿಯ ವಯಸ್ಸಿನ ಮೇಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಬಳ್ಳಾರಿ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕಾಂಗ್ರೆಸ್ನ ಡಿ.ತ್ರಿವೇಣಿ ಸುದ್ದಿಗಾರರೊಂದಿಗೆ ಮಾತನಾಡಿ, “ಬಳ್ಳಾರಿ ಪಾಲಿಕೆಯ ಮೇಯರ್ ಆಗಿ ಆಯ್ಕೆ ಆಗಿರುವುದಕ್ಕೆ ತುಂಬಾ ಖುಷಿ ಇದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾರೂ ಮೇಯರ್, ಕಾರ್ಪೋರೇಟರ್ ಆಗಿಲ್ಲ. ಆದರೆ ನಾನಾಗಿದ್ದೇನೆ. ಹೀಗಾಗಿ ತುಂಬಾ ಖುಷಿ ಎನಿಸುತ್ತಿದೆ. ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಡಿ.ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಜನ ಮತದಾನದ ಹಕ್ಕು ಪಡೆದ ಸದಸ್ಯರು, ಸಂಸದರು, ಶಾಸಕರು ಮತದಾನದಲ್ಲಿ ಪಾಲ್ಗೊಂಡರು. ನಂತರ ತ್ರಿವೇಣಿಗೆ 28 ಮತ್ತು ನಾಗರತ್ನಗೆ ನಿರೀಕ್ಷೆಯಂತೆ 16 ಮತಗಳು ಬಂದಿದ್ದವು.