ಪ್ರಜಾ ನಾಯಕ ಸುದ್ದಿ ದಾವಣಗೆರೆ :- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿ ಕಾರದ ನಿರ್ದೇಶನದ ಮೇರೆಗೆ ಬರುವ ಜುಲೈ 8 ರಂದು ಬೃಹತ್ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.
ಅವರು ಗುರುವಾರ ಜೂ.15 ರಂದು ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ಗೆ ಸಂಬಂಧಿಸಿದಂತೆ ಏರ್ಪಡಿಸ ಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರೀ ಯ ಲೋಕ್ ಅದಾಲತ್ನಲ್ಲಿ ರಾಜಿಯಾಗಬಹುದಾದ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಕೈಗೆತ್ತಿಕೊಂಡು ತ್ವರಿತವಾಗಿ ಮತ್ತು ವೆಚ್ಚವಿಲ್ಲದೇ ನ್ಯಾಯದಾನ ಮಾಡುವ ವ್ಯವಸ್ಥೆ ಇದಾಗಿದೆ.
ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು, ರಾಜಿಯಾಗಬಲ್ಲ ಎಲ್ಲಾ ಸಿವಿಲ್, ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂ ಸ್ವಾಧೀನ ಪರಿಹಾರದ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ, ಮರಳು ಸಾಗಣೆ ಪ್ರಕರಣಗಳು, ವೇತನ ಭತ್ಯೆ, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ರಾಜಿಯಾಗಬಲ್ಲ ಎಲ್ಲಾ ಪ್ರಕರಣಗಳನ್ನು ಇಲ್ಲಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಲೋಕ್ ಅದಾಲತ್ನಲ್ಲಿ ವಿವಾಹ ವಿಚ್ಛೇದನ, ಕೊಲೆ ಪ್ರಕರಣಗಳು ಸೇರಿದಂತೆ ರಾಜೀ ಸಂಧಾನದ ಮೂಲಕ ಇತ್ಯಾರ್ಥ ಮಾಡದೇ ಇರುವಂತಹ ಪ್ರಕರಣಗಳನ್ನು ಅದಾಲತ್ನಲ್ಲಿ ತೆಗೆದುಕೊಳ್ಳುವುದಿ ಲ್ಲ, ಇಂತಹ ಪ್ರಕರಣಗಳನ್ನು ನ್ಯಾಯಾಲಯದಲ್ಲಿಯೇ ಪರಿಹರಿಸಿ ಕೊಳ್ಳಬೇಕಾಗುತ್ತದೆ ಎಂದರು.
ರಾಜೀಯಿಂದ ಅನುಕೂಲವಾಗಲಿ ಎಂದು ರಾಜೀ ಪೂರ್ವ ಸಮಾ ಲೋಚನಾ ಸಭೆಯನ್ನು ಏರ್ಪಡಿಸಲಾಗುತ್ತದೆ. ರಾಜೀಯಿಂದ ಇತ್ಯರ್ಥವಾದರೆ ಆಗುವ ಅನುಕೂಲಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಆದರೆ ರಾಜೀ ಸಂಧಾನದಲ್ಲಿ ಭಾಗವಹಿಸುವವರ ಮೇಲೆ ಒತ್ತಾಯ ಹಾಗೂ ಪ್ರಭಾವ ಬೀರುವುದಿಲ್ಲ. ಪ್ರಕ್ರಿಯೆಯು ಸಂಪೂರ್ಣ ಸಾರ್ವಜನಿಕರ ಸಮ್ಮತಿಯ ಮೇರೆಗೆ ಮಾತ್ರ ನಡೆ ಯುತ್ತದೆ ಎಂದರು.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಹೆಚ್ಚು ಪ್ರಕರಣಗಳನ್ನು ವಿಲೇ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಲು ಮಾತ್ರ ಉದ್ದೇಶಿಸಲಾಗಿದೆ. ಅಂದು ಜಿಲ್ಲೆಯಲ್ಲಿರುವ ತಾಲ್ಲೂಕು ಮಟ್ಟ ಸೇರಿದಂತೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ. ಸಾರ್ವಜನಿಕರು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಬಹುದಾಗಿದೆ.
ಲೋಕ್ ಅದಾಲತ್ಗೆ ಸಂಬಂಧಿಸಿದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 08192-296364, ತಾಲ್ಲೂಕು ಕಾನೂನು ಸೇವಾ ಸಮಿತಿ ಹರಿಹರ 08192-296885, ಹೊನ್ನಾಳಿ 08188-251732, ಚನ್ನಗಿರಿ 08189-229195, ಜಗಳೂರು 08196-227600 ಗೆ ಲೋಕ್ ಅದಾಲತ್ನಲ್ಲಿ ಭಾಗವಹಿಸುವವರು ಸಂಪರ್ಕಿಸಬಹುದಾಗಿದೆ.
ಕೋರ್ಟ್ನಲ್ಲಿ 35787 ಪ್ರಕರಣಗಳು ಬಾಕಿ;- ಜಿಲ್ಲೆಯಲ್ಲಿ ಒಟ್ಟು 35787 ಪ್ರಕರಣಗಳು ಬಾಕಿ ಇದ್ದು ಇದರಲ್ಲಿ ದಾವಣಗೆರೆಯಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 1313, ಜಿಲ್ಲಾ ಹೆಚ್ಚುವರಿ ಸೇಷನ್ಸ್ ಕೋರ್ಟ್ನಲ್ಲಿ 1776, ಹೆಚ್ಚುವರಿ ಸೇಷನ್ಸ್ ಕೋರ್ಟ್ನಲ್ಲಿ 1308, ಹೆಚ್ಚುವರಿ ಸೇಷನ್ಸ್ ಕೋರ್ಟ್ 1 ರಲ್ಲಿ 192, ಕೌಟುಂಬಿಕ ನ್ಯಾಯಾಲಯದಲ್ಲಿ 1999, ಸಿಜೆಎಂ ಕೋರ್ಟ್ನಲ್ಲಿ 1296, ಮೊದಲ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ 1308, 2 ನೇ ಜೆಎಂಎಫ್ಸಿ ಕೋರ್ಟ್ 873, 3 ನೇ ಜೆಎಂಎಫ್ಸಿ ಕೋರ್ಟ್ನಲ್ಲಿ 1184, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಕೋರ್ಟ್ನಲ್ಲಿ 1267, ಒಂದನೇ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್ 2588, 2 ನೇ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್ 2846, 3 ನೇ ಹೆಚ್ಚುವರಿ ಸಿವಿಲ್ ಕೋರ್ಟ್ನಲ್ಲಿ 2520, 4 ನೇ ಹೆಚ್ಚುವರಿ ಸಿವಿಲ್ ಜಡ್ಜ್ ಕೋರ್ಟ್ನಲ್ಲಿ 1441, ಹರಿಹರದ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ 2499, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೆಎಂಎಫ್ಸಿ ಹರಿಹರ 1280, 2 ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಹರಿಹರ 646, ಸೀನಿಯರ್ ಸಿವಿಲ್ ಜಡ್ಜ್ ಕೋರ್ಟ್ ಚನ್ನಗಿರಿ 766, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೆಎಂಎಫ್ಸಿ ಚನ್ನಗಿರಿ 693, 1 ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಚನ್ನಗಿರಿ 1013, 2 ನೇ ಹೆಚ್ಚುವರಿ ಸಿವಿಲ್ ಜೆಎಂಎಫ್ಸಿ ಚನ್ನಗಿರಿ 770, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಹೊನ್ನಾಳಿ 2687, ಹೆಚ್ಚುವರಿ ಸಿವಿಲ್ ಜಡ್ಜ್ ಜೆಎಂಎಫ್ಸಿ ಹೊನ್ನಾಳಿ 1623 ಮತ್ತು ಜಗಳೂರು ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ನಲ್ಲಿ 1169 ಪ್ರಕರಣಗಳು ಬಾಕಿ ಇರುತ್ತವೆ. ಇದರಲ್ಲಿ ರಾಜೀ ಸಂಧಾನದ ಮೂಲಕ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 6318 ಪ್ರಕರಣಗಳನ್ನು ಇತ್ಯರ್ಥ ಮಾಡಬಹುದಾದ ಪ್ರಕರಣಗಳು ಎಂದು ಗುರುತಿಸಲಾಗಿದೆ ಎಂದರು.
ವೀಡಿಯೋ ಕಾನ್ಫರೆನ್ಸ್ ನಲ್ಲಿಯು ಅವಕಾಶ;-ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದೇ ಇರು ವವರು ವೀಡಿಯೋ ಕಾನ್ಫರೆನ್ಸ್ ಮೂಲಕವೂ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಇದ್ದು ಸಾರ್ವ ಜನಿಕರು ಕೋರ್ಟ್ನಲ್ಲಿ ಇರುವ ಪ್ರಕರಣಗಳ ಬಗ್ಗೆ ತಮ್ಮ ಒಪ್ಪಿಗೆ ಯನ್ನು ನೀಡುವ ಮೂಲಕ ಅದಾಲತ್ನಲ್ಲಿ ಭಾಗವಹಿಸಬಹುದಾ ಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅರುಣ್ಕುಮಾರ್ ರವರು ಮಾತನಾಡಿ ಜುಲೈ 8 ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲು ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣನವರ ಮಾತನಾಡಿ ಬೃಹತ್ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಭಾಗವಹಿಸುವವರು ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮತ್ತು ಆಯಾ ತಾಲ್ಲೂಕುಗಳ ಕಾನೂನು ಸೇವಾ ಸಮಿತಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಡಾ ಅರುಣ್.ಕೆ ಮಾತನಾಡಿ ಲೋಕ್ ಅದಾಲತ್ ಯಶಸ್ವಿಯಾಗಲು ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಸವ ರಾಜ್, ಸಹ ಕಾರ್ಯದರ್ಶಿ ಮಂಜುನಾಥ್, ಕೋರ್ಟ್ ಆಡಳಿತಾಧಿ ಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.