ಪ್ರಜಾ ನಾಯಕ ವಿಶೇಷ ಸುದ್ದಿ -: ಯುಗಾದಿ ಹಬ್ಬದ ಕಾಲಕ್ಕೆ ಸರಿಯಾಗಿ ಎಲ್ಲೆಡೆಯ ಹೊಂಗೆ ಮರಗಳು ಚಿಗುರಿ, ಮೊಗ್ಗು ಹೂವಿನೊಂದಿಗೆ ಕಂಗೊಳಿಸುತ್ತಿವೆ ತಾನೆ ? ಅದರಲ್ಲೂ ಈ ವರ್ಷ ಹೊಂಗೆ ಮರಗಳು, ಎಲ್ಲಿಲ್ಲದ ಜೀವಕಳೆಯಿಂದ ಕಂಗೊಳಿಸುತ್ತಿವೆ ! ತರಹೇವಾರಿ ಜೇನು ಹುಳುಗಳು ಹೊಂಗೆ ಹೂವಿನ ಸಿಹಿಯನ್ನು ಹೀರುತ್ತ ಸಂಗೀತದ ಝೇಂಕಾರವನ್ನು ಉಂಟು ಮಾಡುತ್ತಿವೆ. ಹಾಗೆ ಬರಗಾಲದಲ್ಲೂ ಹೊಂಗೆ ಮರದಲ್ಲಿ ಯುಗಾದಿ ನವ ಉಲ್ಲಾಸದೊಂದಿಗೆ ಅರಳಿದೆ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕ್ಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲ್ಲಿ
ಬೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ
ಮತ್ತೆ ಕೇಳಿ ಬರುತಿದೆ.
ಶಾಲಿವಾಹನ ಶಕೆಯ ಪ್ರಕಾರ 1944 ನೇ ವರ್ಷವಾದ ಶುಭಕೃತ ನಾಮ ಸಂವತ್ಸರಕ್ಕೆ ವಿದಾಯ ಹೇಳಿ,1945ನೇ ವರ್ಷ “ಶೋಭಾ ಕೃತ” ನಾಮ ಸಂವತ್ಸರದ ಮೊದಲ ಋತುವಾದ “ವಸಂತ” ಋತುವಿನ “ಚೈತ್ರ” ಮಾಸದ ಶುದ್ಧ ಪಾಡ್ಯದಂದು ನಾವು ಯುಗಾದಿ ಹಬ್ಬವನ್ನು ಆಚರಿಸುತ್ತೇವೆ. ಗಿಡ ಮರ ಬಳ್ಳಿಗಳೆಲ್ಲ ಹಸಿರಿನಿಂದ ಕಂಗೊಳಿಸುವ ಈ ಹಬ್ಬ ಯುಗದ ಆದಿ ಯುಗಾದಿ ಎಂದಾಗಿದೆ. ಯುಗಾದಿಯನ್ನು ಚಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂದು ಎರಡು ರೀತಿಯಲ್ಲಿ ಆಚರಿಸುತ್ತೇವೆ.
ಜಾಹೀರಾತು.
ಶ್ರೀ ವಿಷ್ಣುವು ಸೋಮಕಾಸುರನಿಂದ ವೇದಗಳನ್ನು ಸಂರಕ್ಷಿಸಿ ಬ್ರಹ್ಮದೇವನಿಗೆ ನೀಡಿದ ದಿನವಾದ ಇಂದು ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದನೆಂದು ಪ್ರತೀತಿ ಇದೆ. ಇದಕ್ಕೆ ಸಾಕ್ಷಿಕರಿಸುವಂತೆ ಹಸಿರಿನ ಸೆರಗೊದ್ದ ಪ್ರಕೃತಿ ಹಬ್ಬದ ಸಂಭ್ರಮಕ್ಕೆ ಹೂದಳೆದು ನಿಂತಿದ್ದಾಳೆ. ಅರಳಿದ ಹೂಗಳ ಸೊಬಗು, ಕೋಗಿಲೆಯನಾದ ಮಾಧುರ್ಯದಿಂದಲೇ ಜೀವಸಂಕುಲಕ್ಕೆ ಹೊಸ ಚೈತನ್ಯವನ್ನು ತುಂಬುವ ದಿನ ಇದಾಗಿದೆ.ಶ್ರೀರಾಮಚಂದ್ರನು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿದ ದಿನವೂ ಕೂಡ ಇದೆ ದಿನ ವಾಗಿದೆ.
ಮಾವು ಬೇಹು ತೋರಣ ಹೋಳಿಗೆ ಹುಗ್ಗಿಯ ಹೂರಣ-: ಸಡಗರ ಸಂಭ್ರಮದೊಂದಿಗೆ ಹೊಸ ಬಟ್ಟೆಯನ್ನುಟ್ಟು ಆಚರಿಸುವ ಈ ಹಬ್ಬದ ವಿಶೇಷವೆಂದರೆ “ಬೇವು.ಬೆಲ್ಲ”ಬೇವು ಬೆಲ್ಲ ಈ ಹಬ್ಬದ ವೈಶಿಷ್ಟ್ಯ ಪೂರ್ಣ ಆಚರಣೆಯಾಗಿದೆ ಸಿಹಿ ಕಹಿ ಮಿಶ್ರಣದ ಸೇವನೆ ನಾಲಿಗೆಗೆ ರುಚಿ, ಉದರಕ್ಕೆ ಶುಚಿಯಾದಂತ ಉತ್ತಮವಾದ ಔಷಧಿ ಇದಾಗಿದೆ. ನಮ್ಮ ಬದುಕಿನ ಪಯಣದಲ್ಲಿ ಬರುವ ಕಷ್ಟ ಸುಖವನ್ನು ಸಮಪ್ರಮಾಣದಲ್ಲಿ ಸ್ವೀಕರಿಸುವ ಸಮಷ್ಠಿಭಾವದ ಪ್ರತೀಕ ಈ “ಬೇವು – ಬೆಲ್ಲ”
ಶತಾಯು ವಜ್ರದೇಹಾಯ
ಸರ್ವ ಸಂಪತ್ಕಾರಾಯಚ
ಸರ್ವಾರಿಷ್ಟ ವಿನಾಶಯ
ನಿಂಭಕಂದಳ ಭಕ್ಷಣಂ
ಈ ಶ್ಲೋಕವನ್ನು ನಾವು ಬೇವು ಬೆಲ್ಲ ಸ್ವೀಕರಿಸುವಾಗ ಪಠಣ ಮಾಡುತ್ತೇವೆ. ಆಯುಷ್ಯ, ಆರೋಗ್ಯ,ಸಕಲಸಂಪತ್ತು ನಮ್ಮದಾಗಲಿ,ದಾರಿದ್ರ್ಯನೀಗಲಿ ಎಂಬುದು ಈ ಶ್ಲೋಕದ ಸಾರ.
ಯುಗಾದಿ ಹಬ್ಬವನ್ನು ನಾವು ಮಾತ್ರವಲ್ಲ ಗಿಡ,ಮರ,ಬಳ್ಳಿ, ಪ್ರಾಣಿ – ಪಕ್ಷಿಗಳು ಸಹ ಹೊಸ ಚೈತನ್ಯದೊಂದಿಗೆ ಆರಂಭಿಸುತ್ತವೆ ಎಂದಾದ ನಮಗೂ ಮತ್ತು ಪ್ರಕೃತಿಗೂ ಇರುವ ಅನ್ಯೂನ್ಯ ಸಂಬಂಧ ವನ್ನು ನಾವು ಅರಿಯಬೇಕಾಗಿದೆ.ನಾವು ಆಚರಿಸುವ ಪ್ರತಿ ಯೊಂದು ಹಬ್ಬವು ಪ್ರಕೃತಿಯೊಂದಿಗೆ ಬೆಸೆದು ಕೊಂಡಿರುತ್ತದೆ. ನಮ್ಮ ಪೂರ್ವಜರು ಪ್ರಕೃತಿ ಆರಾಧಕರಾಗಿದ್ದು ಪ್ರತಿಯೊಂದು ಹಬ್ಬದ ಹಿನ್ನೆಲೆಯೂ ಕೂಡ ಪ್ರಕೃತಿಯ ಬದಲಾವಣೆಯನ್ನು ಗಮನಿಸಿ ಆಚರಿಸುತ್ತಿದ್ದರು ಎಂಬುದಕ್ಕೆ ವಸಂತ ಋತುವಿನಲ್ಲಿ ಬರುವ ಈ ಹೊಸದಿನದ ಆಚರಣೆಯ ಯುಗಾದಿ. ಇದು ಕೇವಲ ಕ್ಯಾಲೆಂಡರ್ ಬದಲಾಗುವುದಲ್ಲ, ಇಡೀ ಪ್ರಕೃತಿಯೆ ಬದಲಾಗುತ್ತದೆ .ಇಂದಿಗೂ ನಮ್ಮ ಹಿಂದೂ ಧರ್ಮದ ಪ್ರಕಾರ ನಡೆಯುವ ಮದುವೆ ಯ ಆಹ್ವಾನ ಪತ್ರಿಕೆಯಲ್ಲಿ ಶಾಲಿವಾಹನ ಶಕೆಯ ಮುದ್ರಣವನ್ನೂ ,ಪಂಚಾಂಗರಿತ್ಯ ಮುಹೂರ್ತ ಮತ್ತು ಶುಭಕಾಲವನ್ನು ನಿಗದಿ ಪಡಿಸುವುದನ್ನು ಕಾಣುತ್ತೇವೆ.
” ಪಂಚಾಂಗ ಶ್ರವಣ” ಹೊಸ ದಿನದ ಆರಂಭದಲ್ಲಿ ಪಂಚಾಂಗ ಶ್ರವಣವನ್ನು ಕೇಳುವ ಮೂಲಕ, ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ಇಂದಿಗೂ ಕೂಡ ರೈತರು ಈ ಹೊಸ ವರ್ಷದ ಆರಂಭದ ಈ ದಿನ ಪಂಚಾಂಗ ಕೇಳಿ ಯಾವ ಮಳೆಗೆ ಯೋಗವಿದೆ,ಯಾವ ಧಾನ್ಯಕ್ಕೆ ಉತ್ತಮ ಇಳುವರಿ ಬರುತ್ತದೆ ಎಂಬುದನ್ನು ತಿಳಿದು ಹೊಸ ದಿನವಾದ ಇಂದು ಹೊಲಕ್ಕೆ ಹೋಗಿ ಬೇಸಾಯ ಹೂಡಿ,ಕೃಷಿ ಚಟುವಟಿಕೆಯ ಆರಂಭಕ್ಕೆ ಮೊದಲು ಮಾಡಿ ಭೂಮಿತಾಯಿಗೆ ಉಡಿತುಂಬಿ ಬರುತ್ತಾರೆ.
ಜನರು ಯಾವುದೇ ವೈಜ್ಞಾನಿಕ ಸಾಧನಗಳು ಇಲ್ಲದ ಸಮಯ ದಲ್ಲಿ ಹೀಗೆ ಪ್ರಕೃತಿಯೊಡನೆ ಬೆರೆತು ಬದುಕನ್ನು ನಡೆಸುತ್ತಿದ್ದರು. ಅದರ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳ ಆಚರಣೆಯಿರುತ್ತಿತ್ತು. ಅಕ್ಷರದ ಅರಿವು ಇಲ್ಲದೆ ಹೋದರು ಸಹ ಮಾಸ,ತಿಥಿ, ಮಳೆ ,ನಕ್ಷತ್ರ, ಹುಣ್ಣಿಮೆ – ಅಮಾವಾಸ್ಯೆ ಮತ್ತು ಸಂವತ್ಸರ ಗಳನ್ನು ಬಾಯಲ್ಲಿ ಲೆಕ್ಕ ಹಾಕಿ ಹೇಳುವಂಥ ಪಾಂಡಿತ್ಯವನ್ನು ಹೊಂದಿದ್ದಂತಹ ಪ್ರವೀಣರು ನಮ್ಮ ಹಿರಿಯರು.
ಇಂದಿಗೂ ನಾವು ಆಚರಿಸುವ ಪ್ರತಿಯೊಂದು ಹಬ್ಬವು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ ಹಾಗೆ ಹೇಳುವುದಾದರೆ ಬಿರುಬೇಸಿಲಿ ನಲ್ಲಿ ದೇಹವನ್ನು ತಂಪಾಗಿಸಲೆಂದು ಯುಗಾದಿಯಂದು ನಾವು ಮಾಡುವ ಅಭ್ಯಂಜನ ಸ್ನಾನ. ದೀಪಾವಳಿ, ಸಂಕ್ರಾಂತಿ ಹೀಗೆ ಆಚರಣೆಗಳು ನಮ್ಮ ಪೂರ್ವಿಕರಿಂದ ಅಮೂಲ್ಯ ಉಡುಗೊರೆ ಯಾಗಿ ನಮಗೆ ದೊರೆತಿವೆ. ಇಂತಹ ಸಾಂಸ್ಕೃತಿಕ, ಪಾರಂಪರಿಕ, ವೈಜ್ಞಾನಿಕ ಹಿನ್ನೆಲೆಯ ಮಹತ್ವದ ಆಚರಣೆಯನ್ನು ನಾವು ಸಹ ನಮ್ಮ ಮುಂದಿನ ಪೀಳಿಗೆಗೆ ನೀಡುವುದು ಅಷ್ಟೇ ಅರ್ಥಪೂರ್ಣ ಹಾಗೂ ಸಂಸ್ಕಾರಯುತ ಕರ್ತವ್ಯವಾಗಿದೆ.
ಜಾಹೀರಾತು.
ಇಂದಿನ ಬದುಕಲ್ಲಿ ಎಲ್ಲವನ್ನು ಬೆರಳ ತುದಿಯಲ್ಲೇ ಆಡಿಸುವ ನಾವು ಸ್ನೇಹ,ಪ್ರೀತಿ-ವಿಶ್ವಾಸ ಸಂಬಂಧಗಳ ಮಧುರತೆಗಾಗಿ ಹಂಬಲಿಸುತ್ತಿದ್ದೇವೆ. ಪ್ರೀತಿ ಆದರಗಳು ದೊರೆಯುವುದು ಈ ರೀತಿಯ ಸುಸಂಸ್ಕೃತ ಆಚರಣೆಯಿಂದ ಮಾತ್ರ.ಇಡೀ ಕುಟುಂಬ ವೇ ಒಂದಾಗಿ ಆಚರಿಸುವಂತಹ,ಇಡೀ ಹಳ್ಳಿಯೆ ಒಂದು ಕುಟುಂಬವಾಗಿ ಸಂಭ್ರಮಿಸುವಂತಹ ಆಚರಣೆಗಳು ಕಣ್ಮರೆ ಯಾಗುತ್ತಿವೆ. ಇಂತಹ ಆಚರಣೆಯನ್ನು ನಾವು ಆಚರಿಸುವುದರ ಜೊತೆಗೆ ನಮ್ಮಿಂದ ನಮ್ಮ ಮುಂದಿನ ಪೀಳಿಗೆಗೂ ಕೂಡ ಇದನ್ನು ಕಾಣಿಕೆಯಾಗಿ ನೀಡುವ ಜವಾಬ್ದಾರಿಯನ್ನು ನಾವು ಹೊತ್ತು, ಪ್ರಕೃತಿ ಯೊಂದಿಗೆ ನಾವೂ ಬೆರೆತು ಬಾಳೋಣ. ನಮ್ಮ ಮಕ್ಕಳಿಗೂ ಪ್ರಕೃತಿ ಯೊಂದಿಗೆ ಹೊಸ ಸಂಬಂಧವನ್ನು ಬೆಸೆಯೋಣ ಎನ್ನುವ ಸದಾಶಯದೊಂದಿಗೆ ಎಲ್ಲರಿಗೂ “ಶೋಭಾಕೃತ” ನಾಮ ಸಂವತ್ಸರ ದ ಈ ಯುಗಾದಿಯು ಬದುಕಲ್ಲಿ ಹೊಸ ಶೋಭೆಯನ್ನು ತರಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುತೇನೆ.
✍️ ಬಿ. ಟಿ.ಗೀತಾ ಮಂಜು ಸಾಹಿತಿ ಹಾಗೂ ಶಿಕ್ಷಕಿ ಬೆಣ್ಣೆಹಳ್ಳಿ ಜಗಳೂರು ತಾಲೂಕು