✍️ವರದಿ-: ಹೆಚ್.ಬಾಬು ಮರೇನಹಳ್ಳಿ
ಪ್ರಜಾ ನಾಯಕ ವಿಶೇಷ ಸುದ್ದಿ ಜಗಳೂರು-: ತಾಲೂಕಿನ ಶ್ರೀ ಕಲ್ಲೇದೇವರ ಪುರ ಶ್ರೀ ಕಲ್ಲೇಶ್ವರ ಸ್ವಾಮಿಯ ಜಾತ್ರೆಯು ದಿನಾಂಕ 24-4-2024 ರಂದು ಸ್ವಾಮಿಗೆ -ಕಂಕಣ ಧಾರಣೆ ಮಾಡುವ ಮೂಲಕ ಜಾತ್ರೆ ಪ್ರಾರಂಭವಾಗಿ 25-4-2024 ರಂದು -ಮದಲಿಂಗ ಶಾಸ್ತ್ರ ಮತ್ತು ಗಜೋತ್ಸವ 26-4-2024 ರಂದು -ಅಶ್ವ ವಾಹನೋತ್ಸ ವ 27-4-2024 ರಂದು-ವೃಷಭೋತ್ಸವ 28-4-2024 ರಂದು ಸಂಜೆ 4 ಗಂಟೆ ಮಂಗಳವಾರ ಶ್ರೀ ಕಲ್ಲೇಶ್ವರ ಸ್ವಾಮಿಯ -ದೊಡ್ಡ ರಥೋತ್ಸವ ಜರಗಲಿದೆ ನಂತರ 29-4-2024 ರಂದು – ಅಡ್ಡ ಪಲ್ಲಕ್ಕಿ ಉತ್ಸವ ಮತ್ತು ಕೋಲಾಟ 30-4-2024 ರಂದು ಗುರುವಾರ ಓಕಳಿ ಮಾಡುವ ಮುಖಾಂತರ ಜಾತ್ರೆ ಮುಕ್ತಾಯವಾಗುತ್ತದೆ
ನಂತರ 10 ದಿನಗಳ ಕಾಲ “ಎತ್ತಿನ ಜಾತ್ರೆ” ಆರಂಭ ವಾಗುತ್ತದೆ ಸ್ವಾಮಿಯ ಜಾತ್ರೆಗೆ ರಾಜ್ಯ ಮತ್ತು ಜಿಲ್ಲೆ ತಾಲೂಕು ಗಳಿಂದ ಸಹ ಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆ ಮಾಡುವ ಮೂಲಕ ರಥೋತ್ಸವಕ್ಕೆ ಸಾವಿರಾರು ಭಕ್ತರುಭಾಗವಹಿಸುತ್ತಾರೆ ಎಂದು ಕಲ್ಲೇ ದೇವರಪುರ ಗ್ರಾಮಸ್ಥರು ತಿಳಿಸಿದ್ದಾರೆ
ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಾಲಯದ ಐತಿಹಾಸಿಕ ಪಕ್ಷಿನೋಟ-: ಜಗಳೂರು ಪಟ್ಟಣದಿಂದ 15 ಕಿ.ಮೀ ಚಿತ್ರದುರ್ಗದಿಂದ 25 ಕಿ.ಮೀ ದೂರದಲ್ಲಿರುವ ಕಲ್ಲದೇವರಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ.ಕಲ್ಲೇಶ್ವರ ದೇವರು ನೆಲಿಸಿದ ಕಾರಣ ಕಲ್ಲದೇವರಪುರ ಎಂಬ ಹೆಸರು ಬಂದಿದೆ ಎಂದು ಪ್ರತೀತಿ ಇದೆ.ಇದೊಂದು ಸಹಸ್ರಾರು ಸಂಖ್ಯೆ ಯ ಭಕ್ತ ಸಮೂಹದ ಇಷ್ಟಾರ್ಥಗಳನ್ನು ಈಡೇರಿಸುವ ಆರಾಧ್ಯ ದೈವ ವಾಗಿರುವ ಧಾರ್ಮಿಕ ಕ್ಷೇತ್ರಗಳಲ್ಲೊಂದಾಗಿದೆ ಎನ್ನಬಹುದು.
ಐತಿಹ್ಯ ಹಿನ್ನೆಲೆ:- ದೇವಾಲಯದ ನೆರೆ ಹೊರೆಯ ಪ್ರದೇಶವು ಕಾಡುಜಾಲಿ ಗಿಡಗಂಟೆಗಳಿಂದ ಆವೃತವಾಗಿತ್ತು.ಮಲ್ಲಶೆಟ್ಟಿ ಎಂಬ ವ್ಯಾಪಾರಿಯೊಬ್ಬನು ಇಲ್ಲಿಂದ ಸೌದೆ ತಂದು ನೆಲದ ಮೇಲಿದ್ದ ಕಲ್ಲಿನ ಪಕ್ಕ ಎರಡು ಕಲ್ಲಿಟ್ಟು ಒಲೆಗೂಡುಹೂಡಿ ಮಣ್ಣಿನ ಮಡಿಕೆ ಯಲ್ಲಿ ಅನ್ನತಯಾರಿಸುವಾಗ ಅನ್ನದಮಡಿಕೆ ಯಲ್ಲಿ ರಕ್ತ ಕಾಣಿಸಿ ಕೊಂಡಿತು.ಗಾಬರಿಗೊಂಡ ವ್ಯಾಪಾರಿ ದೇವರನ್ನು ಸ್ಮರಿಸಿದ.ಆಗ ಅಶರೀರವಾಣಿಯೊಂದು ನಾನು ನಿನ್ನ ಭಾವನೆಯಂತೆ ಒಲೆಯ ಗುಂಡುನಾನಲ್ಲ ನಾನು ಕಲ್ಲಿನಾಥ-ಕಲ್ಲೇಶ್ವರ ಎಂದು ನುಡಿದು ಅದರಿಂದ ಚಿಕ್ಕ ಕಲ್ಲು ಸಿಡಿದು.ನಿನ್ನ ವ್ಯಾಪಾರ ತಕ್ಕಡಿಯಲ್ಲಿ ಇದೇ ಕಲ್ಲಿನಿಂದ ತುಲಾಭಾರ ಮಾಡು.ಮಂಗಳವಾಗುವುದು ಎಂದಾಗ ಅದನ್ನು ಪಾಲಿಸಿದ ವ್ಯಾಪಾರಿಗೆ ಲಾಭವಾಗಿ ಅದೇ ಸ್ಥಳದಲ್ಲಿ ಚಿಕ್ಕ ದೇವಸ್ಥಾನ ನಿರ್ಮಿಸಿದ ಇತಿಹಾಸವಿದೆ.ಎನ್ನುತ್ತಾರೆ ಗ್ರಾಮದ ಹಿರಿಯರು.
ಪರಿಚಯ :- ಕಲ್ಲೇಶ್ವರ ದೇವಾಲಯವು ಗ್ರಾಮದ ಮಧ್ಯ ಭಾಗ ದಲ್ಲಿದ್ದು, ಪೂರ್ವಾಭಿಮುಖವಾಗಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ 11 -12ನೇ ಶತಮಾನದಲ್ಲಿ ಇದನ್ನು ನಿರ್ಮಿಸ ಲಾಗಿದೆ. ಗರ್ಭಗೃಹ ,ಅಂತರಾಳ, ನವರಂಗ,ಮಹಾಮಂಟಪ ಸಭಾಮಂಟಪ, ನಂದಿ ಮಂಟಪ, ಉಯ್ಯಾಲೆ ಕಂಬ ಹಾಗೂ ಮಹಾದ್ವಾರ ಗೋಪುರ ಗಳನ್ನು ಒಳಗೊಂಡ ವಿಸ್ತಾರವಾದ ದೇವಾಲಯವಾಗಿದೆ. ಗರ್ಭ ಗೃಹದಲ್ಲಿ ಒಂದು ಅಡಿ ಎತ್ತರದ ಕಪ್ಪುಶಿಲೆಯಲ್ಲಿ ಕಡೆಯಲಾದ ನಯವಾದ ಶಿವಲಿಂಗವಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿವೆ.ನವರಂಗ ದಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿಯನ್ನು ಪ್ರತಿಷ್ಠಾಪಿಸಿರುವರು. ನವರಂಗದಲ್ಲಿ ಗಣೇಶ ಹಾಗೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾದ ಸೂರ್ಯನ ಮೂರ್ತಿ ಇದೆ. ಮುಖಮಂಟಪದ ಎದುರಿನಲ್ಲಿ ನಂದಿಯ ಶಿಲ್ಪವಿದ್ದು ಇದನ್ನು ಅಂಕಲಿ ಬಸವಣ್ಣ ಎಂದು ಕರೆಯುತ್ತಾರೆ.ನವರಂಗದ ಮುಂಭಾಗ ದ ಮಹಾ ಮಂಟಪವು ವಿಜಯ ನಗರೋತ್ತರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.ಮಂಟಪದ ಇಕ್ಕೆಲಗಳಲ್ಲಿ ವೀರಭದ್ರ ಹಾಗೂ ಗೌರಮ್ಮ ದೇವರ ಗರ್ಭಗೃಹಗಳಿವೆ. ಮಹಾಮಂಟಪದ ಬಲಭಾಗದಲ್ಲಿ ವೀರಗಲ್ಲು ಇದ್ದು,ಇದನ್ನು ಈರಗಾರ ಹುಚ್ಚೇಶ್ವರ ಎಂದು ಕರೆಯುತ್ತಾರೆ. ಮಹಾಮಂಟಪದ ಮುಂಭಾಗದಲ್ಲಿ ನಂದಿ ಇದ್ದು ಇದನ್ನು ತೊಟ್ಟಿಪೆಳೆ ಬಸವಣ್ಣ ಎಂದು ಕರೆಯುತ್ತಾರೆ ಗರ್ಭಗೃಹದ ಮೇಲೆ ಪಾಂಸನ ಮಾದರಿಯ ಶಿಖರವಿದೆ.
ಯುಗಾದಿಯ ದಿನದಂದು ಚಂದ್ರ ದರ್ಶನದ ನಂತರ ತೇರನ್ನು ಬಿಡಾರದಿಂದ ಹೊರ ಎಳೆಯುವುದು ಈ ಸಂಪ್ರದಾಯ ಸುಮಾರು ದಶಕಗಳಿಂದ ಚಾಲ್ತಿಯಲ್ಲಿದೆ .ಬೃಹದಾಕಾರದ ಕಲ್ಲಿನ ಗಾಲಿಗಳನ್ನು ಹೊಂದಿ ರುವುದು ತೇರಿನ ವಿಷೇಶ. ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ ವನ್ನು ಕಣ್ತುಂಬಿಕೊಳ್ಳಲು ಸಕಾಲ ಭಕ್ತ ವೃಂದದವರು ಎಪ್ರಿಲ್ 28 ರಂದು ರಥೋತ್ಸವ ಜರಗಲಿದೆ
ಮಜ್ಜನ ಮಂಟಪ:- ದೇವಾಲಯದ ಹಿಂಬಾಗದಲ್ಲಿ ದೊಡ್ಡ ಮಜ್ಜನದ ಮಂಟಪವಿದ್ದು ಇಷ್ಟು ದೊಡ್ಡ ಮಂಟಪ ಬೇರೆಲ್ಲಿಯೂ ಇಲ್ಲವೆಂದು ಹೇಳಲಾಗುತ್ತದೆ.
ಪೂಜೆ:- ಈ ದೇವರಿಗೆ ತ್ರಿಕಾಲಪೂಜೆ,ವಿಶೇಷ ಪೂಜೆ ನಡೆಯು ತ್ತವೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮಹಾರುದ್ರಾಭಿ ಷೇಕ, ಸಹಸ್ರ ಬಿಲ್ವಾರ್ಚನೆ,ಅಷ್ಟೋತ್ತರ ಬಿಲ್ವಾರ್ಚನೆ,ವೇದಮಂತ್ರ ಘೋಷ ನಿಯಮಬದ್ಧವಾಗಿ ನಡೆಯುತ್ತವೆ. ಕಾರ್ತಿಕಮಾಸದಲ್ಲಿ ದೀಪೋತ್ಸವ ನಡೆಯುತ್ತದೆ.
ಜಾತ್ರೆ :– ಕಲ್ಲೇಶ್ವರ ಜಾತ್ರೆ ಹಾಗೂ ನಂತರ ನಡೆಯುವ ದನಗಳ ಜಾತ್ರೆ ಪ್ರತಿವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.ಐದನೇ ದಿನ ಮಹಾ ರಥೋತ್ಸವ ನಡೆಯುತ್ತದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಪರವು ಆಚರಣೆ:- ಗ್ರಾಮದ ಸಮೀಪದಲ್ಲಿ ಇರುವ ಬಸಪ್ಪನ ಹಟ್ಟಿಯ ಬಸವಣ್ಣನ ಗುಡಿಯ ಅಂಗಳದಲ್ಲಿ ಕಲ್ಲೇಶ್ವರ ಸ್ವಾಮಿಯ ಪರೇವು ಆಚರಣೆ ನಡೆಸಲಾಗುತ್ತದೆ.
ಶಾಸನಗಳು :-ಜಗಳೂರಿನ 31,32 (ಕ್ರಿ. ಶ.1235)ಹಾಗೂ 33ನೇ (ಕ್ರಿ. ಶ.1279)ಶಾಸನದಲ್ಲಿ ಈ ದೇವರಿಗೆ ದಾನ ಶಾಸನ ಬಗ್ಗೆ ವಿವರಣೆ ಇದೆ. ವಿಜಯನಗರದ ಅರಸ ಶ್ರೀಕೃಷ್ಣ ದೇವರಾಯ ಕಾಲದಲ್ಲಿ ನೀಡಿದ ದಾನವನ್ನು (ಕ್ರಿ. ಶ.1526) ಶಾಸನದಲ್ಲಿ ತಿಳಿಸಲಾಗಿದೆ.
ಜಾತ್ರೆ ಮುಗಿದ ಮರು ದಿನವೇ ಎತ್ತಿನ ವ್ಯಾಪಾರ:- ದಶಕಗಳಿಂದ ಕಲ್ಲೇಶ್ವರ ಜಾತ್ರೆಯಲ್ಲಿ ಎತ್ತಿನ ಹತ್ತು ದಿನಗಳ ಕಾಲ ವ್ಯಾಪಾರ ನಡೆಯುವುದು ಜಾತ್ರೆಯ ವಿಶೇಷವಾಗಿದೆ. ವಿವಿಧ ಜಾತಿಯ ತಳಿಯ ರಾಸುಗಳು ರಾಜ್ಯದ ವಿವಿಧ ಮೂಲೆಗಳಿಂದ ಈ ಸಂತೆಗೆ ಬರಲಿವೆ ಇಲ್ಲಿನ ರೈತರು ಮುಂಗಾರಿನ ಕೃಷಿಗೆ ಬೇಕಾದ ಅಗತ್ಯ ಎತ್ತುಗಳನ್ನು ಖರೀದಿಸಲಿದ್ದಾರೆ ಈ ಸಂತೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ.ಬಸವ ಜಯಂತಿಯವರೆಗೂ ನಡೆಯುವ ದನಗಳ ಜಾತ್ರೆಯಲ್ಲಿ ವ್ಯಾಪಾರ ಮಾಡುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.
“ಸ್ವಾಮಿಯ ಜಾತ್ರೆಗೆ ಬರುವ ಎಲ್ಲ ಭಕ್ತಾದಿಗಳಿಗೆ ಕುಡಿಯುವ ನೀರು.ಸ್ವಚ್ಛತೆ. ಬೆಳಕು.ನೆರಳಿನ ವ್ಯವಸ್ಥೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಶಾಂತಿವಸ್ಥೆಯಿಂದ ಸ್ವಾಮಿಯ ರಥೋತ್ಸವ ಕ್ಕೆ ಜರುಗಲು ಕೈ ಜೋಡಿಸಬೇಕು ಎಂದು ಕಳಕಳಿ ಮನವಿ “
-ಕೆ.ಜಿ ಶರಣಪ್ಪ ಗೌಡ್ರು ಅಧ್ಯಕ್ಷರು ಶ್ರೀ ಕಲ್ಲೇಶ್ವರ ದೇವಸ್ಥಾನ ಸಮಿತಿ ಕಲ್ಲೇದೇವಪುರ