ಪ್ರಜಾ ನಾಯಕ ಸುದ್ದಿ ಮೈಸೂರು -: ಧ್ರುವ ನಾರಾಯಣ್ (61) ಅವರು ಶನಿವಾರ ಹೃದಯಾಘಾತ ದಿಂದ ಮೈಸೂರಿನ ಡಿಆರ್ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.1961 ಜುಲೈ 31ರಂದು ಚಾಮರಾಜನಗರ ದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.
ಈ ಬಾರಿ ನಂಜನಗೂಡಿನಿಂದ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. 2 ಬಾರಿ ಶಾಸಕ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.
1983ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಧ್ರುವನಾರಾಯಣ್ 1984 ರಲ್ಲಿ ಜಿಕೆವಿಕೆಯ ಎನ್ಎಸ್ಯುಐ ಅಧ್ಯಕ್ಷನಾಗಿ ಆಯ್ಕೆಯಾದರು. ನಂತರ 1986 ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ 1999ರಲ್ಲಿ ಮೊದಲ ಬಾರಿಗೆ ಸಂತೆಮಾರಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಆದರೆ 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 1 ಮತದ ಅಂತರದ ಗೆಲುವು ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ್ದರು.
ನಂತರ 2008ರಲ್ಲಿ ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಬಳಿಕ 2009 ಹಾಗೂ 2014 ರ ಲೋಕಸಭಾ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನನು ಭವಿಸಿದ್ದರು. ಆದರೆ ಸೋಲಿನ ಬಳಿಕವೂ ಪಕ್ಷದಲ್ಲಿ ಹಾಗೂ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿದ್ದರು.
ಸಂಸದರಾಗಿದ್ದ ವೇಳೆ ಅನುದಾನ ಬಳಕೆ ವಿಚಾರದಲ್ಲೂ ಧ್ರುವನಾರಾಯಣ್ ಉತ್ತಮ ಹೆಸರು ಪಡೆದಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಹೆಸರು ಪಡೆದಿದ್ದರು. ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಈ ಬಾರಿ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್ ಅಭ್ಯಥಿಯಾಗಿ ಸ್ಪರ್ಧಿಸುವ ವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು.
ಹೊನ್ನಾಳಿ, ಹರಿಹರ ಪ್ರಜಾಧ್ವನಿ ರದ್ದು:-ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳ ಲಾಗಿತ್ತು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಯಾತ್ರೆ ದಾವಣಗೆರೆಯಲ್ಲಿತ್ತು. ನಿನ್ನೆ ಚನ್ನಗಿರಿ, ಬಸವಾಪಟ್ಟಣ, ಜಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ ನಡೆದಿತ್ತು. ದಾವಣಗೆರೆ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ತಂಗಿದ್ದ ಸಿದ್ದರಾಮಯ್ಯ ಅವರು ಹೊನ್ನಾಳಿಗೆ ಹೊರಡಲು ಅಣಿಯಾಗುತ್ತಿದ್ದರು. ಆದರೆ, ಧ್ರುವ ನಾರಾಯಣ್ ಸಾವಿನಿಂದಾಗಿ ಅವರ ದಾವಣಗೆರೆ ಜಿಲ್ಲೆಯ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು. ಸ್ನೇಹಿತನ ಅಂತಿಮ ದರ್ಶನಕ್ಕೆ ಸಿದ್ದರಾಮಯ್ಯ ತೆರಳಿದರು.
ಒಬ್ಬ ಭವಿಷ್ಯದ ರಾಜಕಾರಣಿಯನ್ನು ಕಳೆದುಕೊಂಡು ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ ಮತ್ತು ಅಪಾರ ನೋವನ್ನುಂಟು ಮಾಡಿದೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ
ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು –ಮಾಜಿ ಶಾಸಕ ಎಚ್ ಪಿ ರಾಜೇಶ್. ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಟ್ಟಿ ಬಿ.ದೇವೇಂದ್ರಪ್ಪ. ಜಗಳೂರು ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಶೀರ್ ಅಹ್ಮದ್ . ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿ ಗಳು ಶ್ರದ್ಧಾಂಜಲಿ ಸಲ್ಲಿಸಿದರು
ಮಾಜಿ ಸಂಸದ ಧ್ರುವನಾರಾಯಣ್ ರವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾoಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ,ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಧ್ರುವನಾರಾಯಣ ತುಂಬಾ ಕ್ರಿಯಾಶೀಲರಾಗಿದ್ದರು. ಜನಪದ ಕಾಳಜಿ ಹೊಂದಿದ್ದ ಉತ್ತಮ ರಾಜಕಾರಣಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದುಃಖ ವ್ಯಕ್ತಪಡಿಸಿ, ಪೊಲೀಸ್ ಗೌರವದೊಂದಿಗೆ ಧ್ರ್ರುವನಾರಾಯಣ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮುಖ್ಯಮಂತ್ರಿ ಪ್ರಾರ್ಥಿಸಿದ್ದಾರೆ.
“ಧ್ರುವನಾರಾಯಣ್ ಅವರ ಹಠಾತ್ ನಿಧನದಿಂದ ದುಃಖವಾಗಿದೆ. ಕಷ್ಟಪಟ್ಟು ದುಡಿಯುವ ಮತ್ತು ವಿನಮ್ರ ತಳಮಟ್ಟದ ನಾಯಕ ಅವರು. ಎನ್ ಎಸ್ ಯುಐ ಮತ್ತು ಯೂತ್ ಕಾಂಗ್ರೆಸ್ ಶ್ರೇಣಿಯ ಮೂಲಕ ಏರಿದ ಸಾಮಾಜಿಕ ನ್ಯಾಯದ ಚಾಂಪಿಯನ್ ಆಗಿದ್ದರು.ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
“ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಆರ್.ನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ”
-ಸಿದ್ದರಾಮಯ್ಯ, ಮಾಜಿ ಸಿಎಂ
ಆರ್.ಧ್ರುವನಾರಾಯಣ ಅವರು ಇಂದು ಹಠಾತ್ ನಿಧನರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಒಬ್ಬ ಸಕ್ರಿಯ ರಾಜಕಾರಣಿಯನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು, ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
“ಧ್ರುವನಾರಾಯಣ್ ನಿಧನದಿಂದ ಇಡೀ ಕಾಂಗ್ರೆಸ್ ಕುಟುಂಬಕ್ಕೆ ನಷ್ಟ ಆಗಿದೆ. ಸಂಭಾವಿತ ರಾಜಕಾರಣಿ, ಯಾರನ್ನೂ ನೋಯಿಸದ ಗುಣ ಅವರಿಗಿತ್ತು. ಅವರು ನನ್ನ ಕಾರ್ಯಾಧ್ಯಕ್ಷ ಅಲ್ಲ, ನನ್ನು ಕುಟುಂಬವಾಗಿದ್ದರು. ಅವರ ನಿಧನ ನೋವು ತಂದಿದೆ.”
-ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ