ಬೆoಗಳೂರು ಸುದ್ದಿ -:
ಪ್ರಜಾಪ್ರಗತಿ ಪತ್ರಿಕೆಯ ವರದಿಗಾರನ ಪತ್ನಿ ಚಿಕಿತ್ಸೆಗೆ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮಾಡಿದ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಪ್ರಜಾಪ್ರಗತಿ ಪತ್ರಿಕೆಯ ಪತ್ರಕರ್ತ ಎಂ.ಡಿ.ಮೋಹನ್ ಅವರ ಪತ್ನಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಸುಮಾರು 4 ಲಕ್ಷ ರೂ ವೆಚ್ಚ ಮಾಡಿಕೊಂಡಿದ್ದು ಸಂಕಷ್ಟದಲ್ಲಿದ್ದರು. ಮೋಹನ್ ಕುಟುಂಬ ಕಷ್ಟದಲ್ಲಿರುವ ಬಗ್ಗೆ ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕುಣಿಗಲ್ ನ ಸಿದ್ದಲಿಂಗಸ್ವಾಮಿ ಗಮನಕ್ಕೆ ತಂದಿದ್ದರು.
ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡುವಂತೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿಗಳು ಪರಿಹಾರ ಮಂಜೂರು ಮಾಡಿದ್ದಾರೆ.
ಪತ್ರಕರ್ತ ಮೋಹನ್ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಯುಡಬ್ಲ್ಯೂಜೆ ಕೃತಜ್ಞತೆಯನ್ನು ಸಲ್ಲಿಸಿದೆ.