ಮಡ್ರಳ್ಳಿ ಶ್ರೀ ಚೌಡೇಶ್ವರಿ ದೇವಿ ರಥೋತ್ಸವಕ್ಕೆ ಹರಿದು ಬಂದ ಜನಸಾಗರ
ಪ್ರಜಾನಾಯಕ ಜಗಳೂರು : ತಾಲೂಕಿನ ಗುರುಸಿದ್ದಾಪುರ (ಮಡ್ರಳ್ಳಿ)ಯ ರಂಗಯ್ಯದುರ್ಗ ಅರಣ್ಯ ಪ್ರದೇಶದಲ್ಲಿ ನೆಲಸಿರುವ ತಾಯಿ ಚೌಡೇಶ್ವರಿ ದೇವಿಯ ಮಹಾರಥೋತ್ಸ ಶುಕ್ರವಾರ ಸಂಜೆ ೫.೨೦ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು

ಮುಂಜಾನೆ ದೇವಿಯ ಮೂರ್ತಿಗೆ ಹೊಳೆ ಪೂಜೆ ನೆರವೇರಿಸ ಲಾಯಿತು. ನಂತರದೇವಿಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಕ, ಗಜೋತ್ಸವ, ಕಂಕಣಧಾರಣೆ, ವೃಷಭೋತ್ಸವ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿದವು. ತೇರಿಗೆ ಹೂವಿನ ಹಾರ, ಬಾವುಟಗಳು, ವಿವಿಧ ವರ್ಣದ ಬಟ್ಟೆಗಳಿಂದ ಅಲಂಕರಿಸಲ್ಪಟ್ಟಿತ್ತು.
ನಾಲ್ಕು ದಿನಗಳ ಕಾಲ ನಡೆಯುವ ತಾಯಿ ಚೌಡೇಶ್ವರಿ ದೇವಿಯ ಜಾತ್ರೆ ಹಿನ್ನೆಲೆ ದೂರದ ಊರುಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಬೆಳಗ್ಗೆಯಿಂದ ದೇವಸ್ಥಾನದ ಆವರಣದಲ್ಲಿ ದೇವಿಯ ದರ್ಶನಕ್ಕೆ ಒಂದು ಕಿ.ಮೀ ದೂರದವರೆಗೂ ಸಾಲುಗಟ್ಟಿ ಚಿಕ್ಕವರು, ದೊಡ್ಡವರು, ವೃದ್ದರು ನಿಂತು ಹರಕೆ ಸಲ್ಲಿಸಿದರು.
ಪಟ ಜರಾಜು ಪ್ರಕ್ರಿಯೆಯಲ್ಲಿ ಅರಸಿಕೆರೆ ಹೋಬಳಿ ಪವನ್ಪುರ ಗ್ರಾಮದ ವಿನಾಯಕ ಅವರಿಗೆ ದೇವಿಮುಕ್ತಿ ಪಟವನ್ನು ೯.೧೦೦೧ಲಕ್ಷ ರೂ ತಮ್ಮದಾಗಿಸಿಕೊಂಡರು.
ಸಂಜೆ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ತೇರಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ೫.೨೦ಕ್ಕೆ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ನೆರದಿದ್ದ ಸಾವಿರಾರು ಭಕ್ತರು ದೇವಿಗೆ ಜಯ ಘೋಷ ಮೊಳಗಿಸಿ ತೇರಿನ ಗಾಲಿಗೆ ತೆಂಗಿನ ಕಾಯಿ ಹೊಡೆದು, ಬಾಳೆ ಹಣ್ಣು, ಉತ್ತತ್ತಿ ಎಸೆದು ತಾಯಿಯ ಕೃಪೆಗೆ ಪಾತ್ರರಾದರು.
ಮಡ್ರಳ್ಳಿ ಚೌಡೇಶ್ವರಿ ನೆಲಸಿರುವ ಪ್ರದೇಶ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ.ರಥೋತ್ಸವ ಮತ್ತುಜಾತ್ರೆಯ ಹಿನ್ನೆಲೆಜನ ಸಾಗರವೇತುಂಬಿತ್ತು.ಅದರಲ್ಲೂ ರಥೋತ್ಸವದ ದಿನವಿಡಿ ವಾಹನಗಳ ಸಂಖ್ಯೆ ದುಪ್ಪಟ್ಟು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳು ಅಲ್ಲದೇತಾಲೂಕಿನ ನೂರಾರು ಹಳ್ಳಿಗಳಿಂದ ಭಕ್ತರು, ಬಸ್, ಕಾರು, ಟ್ಯಾಕ್ಟರ್, ಬೈಕ್ಗಳಲ್ಲಿ ಭಕ್ತರು ಆಗಮಿಸಿದ್ದರಿಂದ ರಸ್ತೆಯುದ್ದಕ್ಕೂಟ್ರಾಫಿಕ್ ಸಮಸ್ಯೆ ಎದುರಾಯಿತು. ಹೊಸಕೆರೆ, ಬಸವನಕೋಟೆ ರಸ್ತೆಗಳಂತೂ ಎರಡ್ಮೂರು ಕಿ.ಮೀ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಈ ರಥೋತ್ಸವದಲ್ಲಿ ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ ಪಾಲಯ್ಯ, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್, ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಆಪ್ತ ಸಹಾಯಕ ಮಧು, ಪಲ್ಲಾಗಟ್ಟೆ ಶೇಖರಪ್ಪ,ಗುತ್ತಿಗೆದಾರ ಶಿವಕುಮಾರ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಬಸವನಕೋಟೆ ಪ್ರಕಾಶ್,ಗುರುಸಿದ್ದನಗೌಡ, ಕೆಚ್ಚೇನಹಳ್ಳಿ ಹರೀಶ್, ಮಡ್ರಳ್ಳಿ ಗಿರೀಶ್, ರಮೇಶ್,ಪೂಜಾರಿ ಪ್ರಕಾಶ್. ಹಾಲೇಶ್. ಶಿವಣ್ಣ. ಮಂಜುನಾಥ್ , ಸೇರಿದಂತೆ ಮತ್ತಿತರರಿದ್ದರು.
ಬಿಸಿಲಿಗೆ ಭಕ್ತರು ಹೈರಾಣು
ಮಡ್ರಳ್ಳಿ ಚೌಡೇಶ್ವರಿ ಜಾತ್ರೆ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಅರಣ್ಯದೊಳಗೆ ಇರುವುದರಿಂದ ಗಿಡಮರಗಳು ಸಾಕಷ್ಟಿವೆಯಾದರೂ ಬಿಸಿಲಿನ ತಾಪ ಮಾತ್ರ ಕಡಿಮೆ ಇರಲಿಲ್ಲ.ಬೆಳ್ಳಿಗೆದ ಸಂಜೆಯವರೆಗೂ ಭಕ್ತರು ಬಿಸಿಲಿಗೆ ಹೈರಾಣಾದರು. ಮಹಿಳೆಯರು, ಮಕ್ಕಳು, ವಯೋವೃದ್ದರು ಎನ್ನದೆ ಸಾವಿರಾರು ಭಕ್ತರು ರಥೋತ್ಸವಕ್ಕೆ ಬಂದಿದ್ದರಿಂದ ಜನದಟ್ಟಣೆಯಿಂದ ತುಂಬಿತ್ತು. ಇದರ ಜತೆ ಧೂಳ್ ಭಕ್ತರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಬಾರಿ ವಾಹನಗಳ ಸಂಚಾರದಿಂದ ಎಲ್ಲಿ ನೋಡಿದರು ಧೂಳು ಕಂಡು ಬಂದಿತು.
ಜಾತ್ರೆಯಲ್ಲಿ ಖಾರಮಂಡಕ್ಕಿ ಪಲಾರ ಖರೀದಿ ಜೋರು
ಹೌದು ಜಾತ್ರೆ ಎಂದರೆ ಹಳ್ಳಿಯ ಜನರಿಗೆ ಸಂಭ್ರಮ, ಜಾತ್ರೆಗೆ ಬರುವ ಭಕ್ತರು ಮನೆಗೆ ಮರಳುವಾಗ ಬರೀಗೈಯಲ್ಲಿ ಹಿಂತಿರುಗುವುದಿಲ್ಲ. ಹಾಗಾಗಿ ತೇರಿನ ರಾಜ ಬೀದಿಗಳಲ್ಲಿ ಹಾಕಿರುವ ಅಂಗಡಿಗಳಲ್ಲಿ ಖಾರಮಂಡಕ್ಕಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.
ತಂಪು ಪಾನಿಯಗಳಿಗೆ ಡಿಮ್ಯಾಂಡ್
ಬಿಸಲಿನ ತಾಪಮಾನ ಒಂದೆಡೆಯಾದರೆ ಮತ್ತೊಂದೆಡೆ ಬಾಯಾರಿಕೆ ಹಾಗಾಗಿ ಭಕ್ತರು ತಂಪು ಪಾನೀಯಗಳ ಮೊರೆ ಹೋಗಿದ್ದರು. ಕಬ್ಬಿನ ಹಾಲು, ಕಲ್ಲಂಗಡಿ, ಜ್ಯೂಸ್, ಐಸ್ ಕ್ರೀಮ್ ಖರೀದಿಸಿ ಸವಿದು ನಿಟ್ಟುಸಿರು ಬಿಡುತ್ತಿದ್ದ ದೃಶ ಕಂಡು ಬಂದಿತು. ಚಿಕ್ಕಮಕ್ಕಳು, ದೊಡ್ಡವರು ಎನ್ನದೆ ಎಲ್ಲರು ತಂಪು ಪಾನೀಯ ಸವಿದರು.
ದೇವಿ ಪಟ ಅರ್ಪಿಸಿದ ಶಾಸಕರ ಪುತ್ರ
ಕಳೆದ ವರ್ಷದ ರಥೋತ್ಸವದಲ್ಲಿ ಚೌಡೇಶ್ವರಿ ದೇವಿಯ ಪಟ ಹರಾಜಿನಲ್ಲಿ ಜಗಳೂರಿನ ಶಾಸಕ ಬಿ.ದೇವೇಂದ್ರಪ್ಪ ಸುಮಾರು ೧೫ ಲಕ್ಷಕ್ಕೆ ಕೂಗಿಕೊಂಡು ತಮ್ಮದಾಗಿಸಿಕೊಂಡಿದ್ದರು. ಇಂದು ದೇವಿಗೆ ಪಟ ಅರ್ಪಿಸಬೇಕಾಗಿದ್ದ ಶಾಸಕರು ರಾಜ್ಯ ಬಜೆಟ್ ಹಿನ್ನೆಲೆ ಆಗಮಿಸಲಾಗದ ಕಾರಣ ಅವರ ಪುತ್ರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್ ತಮ್ಮ ಕುಟುಂದವರೊಂದಿಗೆ ಶುಕ್ರವಾರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಟವನ್ನು ದೇವಿಗೆ ಅರ್ಪಿಸಿ ಪುನೀತರಾದರು.
ಬಾಳೆಹಣ್ಣಿನಲ್ಲಿ ಹರಕೆ
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಪಾಸ್ ಮಾಡುವಂತೆ ಬಾಳೆ ಹಣ್ಣಿನಲ್ಲಿ ಬರೆದು, ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆದು ಹರಕೆ ಹೊತ್ತುಕೊಂಡರು. ಇನ್ನು ಕೆಲವರು ಸರ್ಕಾರಿ ಕೆಲಸ, ಆರೋಗ್ಯ, ಸಾಲದ ಬಾಧೆಯಿಂದ ತಪ್ಪಿಸಲು ಕೋರಿಕೊಂಡರು.

